ಆಸ್ಟ್ರೇಲಿಯಾ ತಂಡದ ಪ್ರಮುಖ ಆಟಗಾರ ಮಾರ್ಕಸ್ ಸ್ಟೊಯಿನಿಸ್ ಏಕದಿನ ಕ್ರಿಕೆಟ್ನಿಂದ ನಿವೃತ್ತರಾಗಿದ್ದಾರೆ. ನನ್ನ ಈ ನಿರ್ಧಾರ, ಸುಲಭವಾಗಿಲ್ಲ. ಆದರೆ ಏಕದಿನ ಕ್ರಿಕೆಟ್ನಿಂದ ಹೊರಗುಳಿದು ನನ್ನ ವೃತ್ತಿಜೀವನದ ಮುಂದಿನ ಅಧ್ಯಾಯದತ್ತ ಸಂಪೂರ್ಣವಾಗಿ ಗಮನಹರಿಸಲು ಇದು ಸರಿಯಾದ ಸಮಯ ಎಂದು ನಾನು ನಂಬುತ್ತೇನೆ ಎಂದು ಮಾರ್ಕಸ್ ಸ್ಟೊಯಿನಿಸ್ ತಿಳಿಸಿದ್ದಾರೆ.
ಆಸ್ಟ್ರೇಲಿಯಾ ತಂಡದ ಸ್ಟಾರ್ ಆಲ್ರೌಂಡರ್ ಮಾರ್ಕಸ್ ಸ್ಟೊಯಿನಿಸ್ ಏಕದಿನ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೆ ದಿನಗಳು ಮಾತ್ರ ಉಳಿದಿರುವಾಗ ಸ್ಟೊಯಿನಿಸ್ ಅಚ್ಚರಿಯ ನಿರ್ಧಾರ ಪ್ರಕಟಿಸಿದ್ದಾರೆ. ಹೀಗಾಗಿ ಮುಂಬರುವ ಟೂರ್ನಿಗೆ ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್ ಬದಲಿ ಆಲ್ರೌಂಡರ್ನನ್ನು ಆಯ್ಕೆ ಮಾಡಬೇಕಾಗುತ್ತದೆ.
ಇದಕ್ಕೂ ಮುನ್ನ ಚಾಂಪಿಯನ್ಸ್ ಟ್ರೋಫಿಗಾಗಿ ಆಯ್ಕೆ ಮಾಡಲಾದ 15 ಸದಸ್ಯರ ಆಸ್ಟ್ರೇಲಿಯಾ ತಂಡದಲ್ಲಿ ಮಾರ್ಕಸ್ ಸ್ಟೊಯಿನಿಸ್ ಕಾಣಿಸಿಕೊಂಡಿದ್ದರು. ಆದರೀಗ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಕೆರಿಯರ್ ಅಂತ್ಯಗೊಳಿಸುತ್ತಿರುವುದಾಗಿ ಸ್ಟೊಯಿನಿಸ್ ತಿಳಿಸಿದ್ದಾರೆ.
35 ವರ್ಷದ ಮಾರ್ಕಸ್ ಸ್ಟೊಯಿನಿಸ್ ಏಕದಿನ ಕ್ರಿಕೆಟ್ಗೆ ಗುಡ್ ಬೈ ಹೇಳಿದ್ದು, ಇದಾಗ್ಯೂ ಅವರು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಮುಂದುವರೆಯುವುದಾಗಿ ತಿಳಿಸಿದ್ದಾರೆ. ಅಲ್ಲದೆ ಮುಂಬರುವ ದಿನಗಳಲ್ಲಿ ಫ್ರಾಂಚೈಸಿ ಲೀಗ್ನತ್ತ ಹೆಚ್ಚಿನ ಗಮನ ಕೇಂದ್ರೀಕರಿಸಲು ನಿರ್ಧರಿಸಿದ್ದಾರೆ.
ಮಾರ್ಕಸ್ ಸ್ಟೊಯಿನಿಸ್ ಆಸ್ಟ್ರೇಲಿಯಾ ಪರ 71 ಏಕದಿನ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 64 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿರುವ ಅವರು 1 ಶತಕ ಹಾಗೂ 6 ಅರ್ಧಶತಕಗಳೊಂದಿಗೆ ಒಟ್ಟು 1495 ರನ್ ಕಲೆಹಾಕಿದ್ದಾರೆ. ಹಾಗೆಯೇ 64 ಇನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿ 48 ವಿಕೆಟ್ಗಳನ್ನು ಸಹ ಕಬಳಿಸಿದ್ದಾರೆ.
2015 ರಿಂದ ಶುರುವಾದ ಏಕದಿನ ಕ್ರಿಕೆಟ್ ಬದುಕಿಗೆ 10 ವರ್ಷಗಳ ಬಳಿಕ ಮಾರ್ಕಸ್ ಸ್ಟೊಯಿನಿಸ್ ಅಂತ್ಯವಾಡಿದ್ದು, ಹೀಗಾಗಿ ಮುಂಬರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಸ್ಟೊಯಿನಿಸ್ ಕಾಣಿಸಿಕೊಳ್ಳುವುದಿಲ್ಲ. ಇದಾಗ್ಯೂ ಅವರು ಟಿ20 ತಂಡದಲ್ಲಿ ಮುಂದುವರೆಯುವ ವಿಶ್ವಾಸದಲ್ಲಿದ್ದಾರೆ.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: https://whatsapp.com/channel/0029VafyCqRFnSzHn1JWKi1B
ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ: https://chat.whatsapp.com/HWayJDSBf9aI06q6jplPgc