ಮೆಟಾ ಸಂಸ್ಥೆ ಈಗ ಹೊಸ ಸುತ್ತಿನ ಲೇ ಆಫ್ ಆರಂಭಿಸಿದೆ. ನಿನ್ನೆ ದಿ ವರ್ಜ್ನಲ್ಲಿ ಪ್ರಕಟವಾದ ವರದಿ ಪ್ರಕಾರ ವಾಟ್ಸಾಪ್, ಇನ್ಸ್ಟಾಗ್ರಾಮ್, ರಿಯಾಲಿಟಿ ಲ್ಯಾಬ್ಸ್ ಸೇರಿದಂತೆ ಮೆಟಾದ ವಿವಿಧ ವಿಭಾಗಗಳಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲಾಗುತ್ತಿದೆ. ದೂರಗಾಮಿ ಕಾರ್ಯತಂತ್ರದ ಭಾಗವಾಗಿ ಮೆಟಾ ಸಂಸ್ಥೆ ಈ ಕ್ರಮ ತೆಗೆದುಕೊಳ್ಳುತ್ತಿದೆ. ಮೆಟಾದಿಂದ ಲೇ ಆಫ್ ಮಾತ್ರವಲ್ಲ, ವಿವಿಧ ತಂಡಗಳೊಳಗೆ ಸ್ಥಾನ ಬದಲಾವಣೆ, ಸ್ಥಳ ಬದಲಾವಣೆಗಳನ್ನೂ ಮಾಡಲಾಗುತ್ತಿದೆ.
ಕೆಲ ತಂಡಗಳನ್ನು ಬೇರೆಡೆ ಸ್ಥಳಾಂತರ ಮಾಡಲಾಗುತ್ತಿದೆ. ಕೆಲ ಉದ್ಯೋಗಿಗಳ ಹುದ್ದೆಗಳಲ್ಲಿ ಬದಲಾವಣೆ ಮಾಡಲಾಗುತ್ತಿದೆ. ಒಂದು ಹುದ್ದೆ ಅನಗತ್ಯ ಎನಿಸಿದರೆ ಆ ಹುದ್ದೆಯಲ್ಲಿರುವವರಿಗೆ ಪರ್ಯಾಯ ಅವಕಾಶಗಳನ್ನು ಒದಗಿಸಲು ಆದ್ಯತೆ ಕೊಡಲಾತ್ತದೆ. ಪರ್ಯಾಯ ಸಿಕ್ಕದೇ ಹೋದ ಸಂದರ್ಭದಲ್ಲಿ ಮಾತ್ರವೇ ಆ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವುದು ಅನಿವಾರ್ಯ ಎಂದು ಹೇಳಲಾಗುತ್ತಿದೆ. ಒಟ್ಟಾರೆ ಲೇ ಆಫ್ ಆಗಿರುವ ಉದ್ಯೋಗಿಗಳ ಸಂಖ್ಯೆ ಎಷ್ಟು ಎಂಬ ಮಾಹಿತಿ ತಿಳಿದುಬಂದಿಲ್ಲ. ದಿ ವರ್ಜ್ ವರದಿ ಪ್ರಕಾರ ಸಣ್ಣ ಪ್ರಮಾಣದಲ್ಲಿ ಲೇ ಆಫ್ ಮಾಡಲಾಗುತ್ತಿದೆ. ಕೆಲ ನೂರುಗಳ ಸಂಖ್ಯೆಯಲ್ಲಿ ಕೆಲಸ ಹೋಗುತ್ತಿರುವ ಸಾಧ್ಯತೆ ಇದೆ.
2022ರ ನವೆಂಬರ್ನಲ್ಲಿ ಮೆಟಾ ಸಂಸ್ಥೆ ಬರೋಬ್ಬರಿ 21,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿತ್ತು. ಸಂಸ್ಥೆಯ ಕ್ಷಮತೆ ಹೆಚ್ಚಿಸಲು ಈ ದೊಡ್ಡ ಸರ್ಜರಿ ನಡೆಸಲಾಗಿತ್ತೆನ್ನಲಾಗಿದೆ. ಆ ಬಳಿಕ ಕೆಲ ಹಂತಗಳಲ್ಲಿ ಸಣ್ಣ ಪುಟ್ಟ ಮಟ್ಟದಲ್ಲಿ ಲೇ ಆಫ್ ನಡೆಸಲಾಗುತ್ತಿದೆ. ಅದು ಕಂಪನಿಯ ದೂರಗಾಮಿ ಕಾರ್ಯತಂತ್ರದ ಭಾಗವಾಗಿ ತೆಗೆದುಕೊಳ್ಳಲಾಗುತ್ತಿರುವ ಕ್ರಮ. ಎರಡು ವರ್ಷದ ಹಿಂದೆ ಈ ದೊಡ್ಡ ಲೇ ಆಫ್ ಕ್ರಮದ ಬಳಿಕ ಷೇರು ಮಾರುಕಟ್ಟೆಯಲ್ಲಿ ಮೆಟಾಗೆ ಬೇಡಿಕೆ ಹೆಚ್ಚಾಗಿದೆ. ಈ ಒಂದು ವರ್ಷದಲ್ಲಿ ಮೆಟಾದ ಷೇರು ಮೌಲ್ಯ ಶೇ. 60ಕ್ಕಿಂತ ಹೆಚ್ಚಳ ಆಗಿದೆ. ಇತ್ತೀಚೆಗೆ ಮೆಟಾದ ಆದಾಯ ಮತ್ತು ಲಾಭದ ವರದಿ ಕೂಡ ಸಕಾರಾತ್ಮಕವಾಗಿದೆ. ಎರಡನೆ ಕ್ವಾರ್ಟರ್ನಲ್ಲಿ (ಏಪ್ರಿಲ್ನಿಂದ ಜೂನ್) ನಿರೀಕ್ಷೆ ಮೀರಿದ ಆದಾಯವನ್ನು ಮೆಟಾ ಪಡೆದಿದೆ. ಮೂರನೆ ಕ್ವಾರ್ಟರ್ಗೂ ತನ್ನ ಆದಾಯದ ಬಗ್ಗೆ ಮೆಟಾ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದೆ. ಇದು ಮೆಟಾ ಷೇರುಗಳಿಗೆ ಬೇಡಿಕೆ ಹೆಚ್ಚುವಂತೆ ಮಾಡಿದೆ.