ಬೆಂಗಳೂರು: ಮೈಕ್ರೋ ಫೈನಾನ್ಸ್ನವರ ತೀವ್ರ ಕಿರುಕುಳ, ಆನ್ಲೈನ್ ಗೇಮ್ಸ್ ಮೂಲಕ ಸರ್ವನಾಶ ಆಗುತ್ತಿದ್ದರೂ ಸರಕಾರ ಕಾಳಜಿ ವಹಿಸುತ್ತಿಲ್ಲ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಕ್ಷೇಪಿಸಿದ್ದಾರೆ.
ವಿಧಾನಸೌಧದ ಕೊಠಡಿ ಸಂಖ್ಯೆ 155ರಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸರಕಾರವೂ ಬುರುಡೆ ಬಿಟ್ಟುಕೊಂಡು ಜನರನ್ನು ವಂಚಿಸುತ್ತಿದೆ. ಮೈಕ್ರೋ ಫೈನಾನ್ಸ್ಗಳಿಂದ ಜನರು ಸಾಯುತ್ತಿದ್ದಾರೆ. ಮೈಕ್ರೋ ಫೈನಾನ್ಸ್ನ ಹಣ ಕಟ್ಟಲಾಗದೆ ಇದ್ದುದಕ್ಕಾಗಿ ರಾಮನಗರದ ಹೆಣ್ಮಗಳೊಬ್ಬರು ಕಿಡ್ನಿ ಮಾರಾಟ ಮಾಡಿದ ವಿಚಾರ ಇವತ್ತಿನ ಪತ್ರಿಕೆಯಲ್ಲಿದೆ ಎಂದು ಗಮನ ಸೆಳೆದರು.
ಈ ಸರಕಾರ ನಿದ್ದೆ ಮಾಡುತ್ತಿದೆಯೇ? ಬದುಕಿದೆಯೇ? ಸತ್ತಿದೆಯೇ ಎಂದು ಅವರು ಪ್ರಶ್ನಿಸಿದರು. ಇವರಿಗೆ ಏನಾಗಿದೆ? ಈ ಸರಕಾರಕ್ಕೆ ಅಧಿಕಾರದ ಮದ ಏರಿದೆ. ಇವರ ಅಧಿಕಾರ ಗುದ್ದಾಟದಲ್ಲಿ ರಾಜ್ಯದ ಹಿತವನ್ನೇ ಈ ಸರಕಾರ ಬಲಿ ಕೊಡುತ್ತಿದೆ ಎಂದು ಟೀಕಿಸಿದರು.
ಕೆಲವು ವಿಚಾರಗಳಲ್ಲಿ ಅಗ್ಗದ ಪ್ರಚಾರ ಮಾಡಿಕೊಂಡು ಯಾವುದೇ ಅಭಿವೃದ್ಧಿ ಮಾಡದೆ, ಜನರನ್ನು ಸಂಕಷ್ಟಕ್ಕೆ ದೂಡುವ ಕೆಲಸವನ್ನು ಈ ಸರಕಾರ ಮಾಡುತ್ತಿದೆ. ಕಾನೂನುಗಳಿದ್ದರೂ ಜನರು ಕಷ್ಟ ಪಡುವ, ಪ್ರಾಣತ್ಯಾಗ ಮಾಡುವ ಪರಿಸ್ಥಿತಿ ನಿರ್ಮಾಣ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು. ಆನ್ಲೈನ್ ಗೇಮ್ಸ್ ಬಗ್ಗೆ ಸರಕಾರ ಚಕಾರ ಎತ್ತುತ್ತಿಲ್ಲ. ಮೈಕ್ರೋ ಫೈನಾನ್ಸ್ ಇವತ್ತು ಯಾವ ರೀತಿ ಜನರ ಜೀವ ತೆಗೆಯುತ್ತಿದೆಯೋ ಸಮಸ್ಯೆ ಅದಕ್ಕಿಂತ ಹೆಚ್ಚಾಗುತ್ತಿದೆ. ಆನ್ಲೈನ್ ಗೇಮ್ಸ್ನಲ್ಲಿ ರಮ್ಮಿ ಆಟ ಇದೆ. ಆಟ ಆಡಿದರೆ ಸಾವಿರಾರು ರೂಪಾಯಿ ಗಳಿಸಬಹುದೆಂಬ ಆಮಿಷದ ಜಾಹೀರಾತು ತಾನಾಗಿಯೇ ಬರುತ್ತದೆ; ಇಂಥವಕ್ಕೆ ಇವರಲ್ಲಿ ಕಡಿವಾಣವೇ ಇಲ್ಲ ಎಂದು ಟೀಕಿಸಿದರು.
ಆನ್ಲೈನ್ ಗೇಮ್ ಮೂಲಕ ಆಟ ಆಡಿ ಸರ್ವನಾಶ ಆಗುತ್ತಿದ್ದಾರೆ. ಇಂಥ ಪರಿಸ್ಥಿತಿ ಇದ್ದರೂ ಕೂಡ ಸರಕಾರ ಕಾಳಜಿ ವಹಿಸಿಲ್ಲ; ಬಡಜನರು ಇವತ್ತು ಹಾಳಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
ಮುಡಾ ಹಗರಣದಲ್ಲಿ ಕ್ಲೀನ್ ಚಿಟ್ ಕೊಡ್ತಾರಂತೆ…
ಮುಡಾ ಹಗರಣದಲ್ಲಿ ಮುಖ್ಯಮಂತ್ರಿಗಳ ಒಳಗೊಳ್ಳುವಿಕೆ ಆರೋಪ ಇದೆ. ವೈಟ್ನರ್ ಹಾಕಿದ್ದನ್ನು ಜನ ನೋಡಿದ್ದಾರೆ. ಸಚಿವರು ಕಡತ (ಫೈಲ್) ಹೊತ್ತುಕೊಂಡು ಬಂದದ್ದನ್ನೂ ಜನರು ಕೇಳಿದ್ದಾರೆ. ಮಾನ್ಯ ಮುಖ್ಯಮಂತ್ರಿಗಳು ಪತ್ರ ಬರೆದಿದ್ದರು ಎಂಬುದನ್ನು ಗಮನಿಸಿದ್ದಾರೆ. ಇಷ್ಟೆಲ್ಲ ಆದರೂ ಅವರಿಗೆ ಕ್ಲೀನ್ಚಿಟ್ ಕೊಡುತ್ತಾರಂತೆ. 14 ಸೈಟ್ ನನ್ನದು ಎಂದಿದ್ದರು. ಅವನ್ನು ವಾಪಸ್ ಕೊಟ್ಟಾಗಿದೆ. ಈ ಕಥೆ ಹೇಗಿದೆ ಎಂದರೆ, ಮರ್ಡರ್ ಏನೋ ಆಗಿದೆ. ಬಾಡಿಯೂ ಅಲ್ಲಿದೆ. ಬಾಡಿ ಇರುವುದೂ ಸತ್ಯ; ಮರ್ಡರ್ ಆದುದೂ ಸತ್ಯ. ಯಾರಿಂದ ಮರ್ಡರ್ ಎಂಬುದನ್ನು ಸಾಬೀತು ಮಾಡಲಾಗುತ್ತಿಲ್ಲ; ಆದ್ದರಿಂದಲೇ ಇದೊಂದು ರೀತಿಯ ಅಪರಾಧವಲ್ಲ ಎಂಬಂತೆ ಬಿಂಬಿಸುತ್ತಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ಅವರು ಟೀಕಿಸಿದರು.
ಹಗರಣದಲ್ಲಿ ಮುಖ್ಯಮಂತ್ರಿಗಳು ನೇರಾನೇರವಾಗಿ ಇರುವುದು ರಾಜ್ಯಕ್ಕೇ ಗೊತ್ತಿದೆ. ಇದರಲ್ಲಿ ಕೇವಲ 14 ನಿವೇಶನಗಳಲ್ಲ; ಸಾವಿರಾರು ಸೈಟ್ಗಳು, ಬಹಳಷ್ಟು ಜನರು, ಇನ್ನೂ ಅನೇಕ ಮುಖಂಡರಿದ್ದಾರೆ. ಇಷ್ಟಾದರೂ ಇದು ಹಗರಣವಲ್ಲ; ಅಪರಾಧ ಆಗಿಲ್ಲ ಎಂಬುದಾದರೆ, ಈ ದೇಶದಲ್ಲಿ ಇನ್ನೇನೂ ಕೂಡ ಅಪರಾಧವಲ್ಲ ಎಂದು ವಿಶ್ಲೇಷಿಸಿದರು.
ವಾಲ್ಮೀಕಿ ನಿಗಮದ್ದು ಏನಾಯ್ತು? ಎಸ್ಐಟಿಗೆ ಕೊಟ್ಟಿರಿ. 187 ಕೋಟಿ ಅವ್ಯವಹಾರ ಆಗಿಲ್ಲ ಎಂದು ಸಿಎಂ ಹೇಳಿದ್ದರು. ಬರೀ 87 ಕೋಟಿ ಅವ್ಯವಹಾರ ಎಂದು ಸದನದಲ್ಲೇ ಹೇಳಿದ್ದರು. ಇಲ್ಲಿ ನುಂಗಿದ್ದು ಗ್ಯಾರಂಟಿ ಆಗಿತ್ತು. ಕೆಲವರು ಜೈಲಿಗೂ ಹೋದರು. ಮಂತ್ರಿಗಳು, ಚೇರ್ಮನ್ ಹೆಸರೂ ಅದರಲ್ಲಿತ್ತು. ಮಂತ್ರಿಗಳು ಜೈಲಿಗೆ ಹೋಗಿ ಬಂದರೂ ಎಸ್ಐಟಿ ಅವರ ಹೆಸರನ್ನು ಸೇರಿಸಿಲ್ಲ ಎಂದು ಇದೇ ಸಂದರ್ಭದಲ್ಲಿ ಟೀಕಿಸಿದರು.
ಕ್ಲೀನ್ ಚಿಟ್ ಕೊಡಲೆಂದೇ ತನಿಖಾ ಸಂಸ್ಥೆಗಳ ಬಳಕೆ?
ಶೇ 40 ಕಮಿಷನ್ ಸರಕಾರ ಬಿಜೆಪಿಯದು ಎಂದು ಕಾಂಗ್ರೆಸ್ಸಿನವರು ಟೀಕಿಸುತ್ತಿದ್ದರು. ಅದನ್ನು ಸಾಬೀತು ಪಡಿಸಲಾಗಲಿಲ್ಲ; ಅದನ್ನು ಲೋಕಾಯುಕ್ತಕ್ಕೆ ಕೊಟ್ಟರು. ಲೋಕಾಯುಕ್ತ ಪುರಾವೆ ಇಲ್ಲ ಎಂದು ಪ್ರಕರಣ ಮುಕ್ತಾಯಗೊಳಿಸಿತ್ತು. ಆದರೆ, ಮುಖ್ಯಮಂತ್ರಿಗಳು ಮಾಧ್ಯಮಗಳ ಮುಂದೆ, ಆ ರೀತಿ ಮಾಡಿಲ್ಲ ಎಂದು ಅಲ್ಲಿ ಹೇಳಿರಬಹುದು; ಮಾಡಿಯೇ ಇಲ್ಲ ಎಂದು ಅಲ್ಲ; ನಿಜವಾಗಿ ಮಾಡಿದ್ದಾರೆ ಎಂದಿದ್ದರು. ಇದರರ್ಥ ನಿಮ್ಮ ಲೋಕಾಯುಕ್ತದ ವರದಿಯನ್ನು ನೀವೇ ಒಪ್ಪಲಿಲ್ಲ ಎಂದಲ್ಲವೇ ಎಂದು ಛಲವಾದಿ ನಾರಾಯಣಸ್ವಾಮಿ ಅವರು ಆಕ್ಷೇಪ ವ್ಯಕ್ತಪಡಿಸಿದರು. ನಿಮ್ಮ ಇಲಾಖೆ ಮೇಲೆ ನಿಮಗೆಷ್ಟು ನಂಬಿಕೆ ಇದೆ ಎಂಬುದು ಇದರಿಂದ ಸಾಬೀತಾಗಿದೆ ಎಂದು ವ್ಯಂಗ್ಯವಾಡಿದರು. ಎಸ್ಐಟಿ, ಸಿಐಡಿ, ಲೋಕಾಯುಕ್ತವನ್ನು ಕ್ಲೀನ್ ಚಿಟ್ ಕೊಡಲೆಂದೇ ಬಳಸಿಕೊಳ್ಳುತ್ತಿದ್ದೀರಾ? ಎಂದು ಅವರು ಪ್ರಶ್ನಿಸಿದರು.
ಸರಕಾರದಲ್ಲಿ ಸಂಪೂರ್ಣ ಭ್ರಷ್ಟಾಚಾರ ತುಂಬಿ ತುಳುಕಾಡುತ್ತಿದೆ. ಶಾಸಕರು, ಸಚಿವರು ಕೇವಲ ಪ್ರೈವೆಟ್ ಲಿಮಿಟೆಡ್ ಕಂಪೆನಿ ಮಾಡುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ರಾಮನಗರ ಶಾಸಕರು ಊರನ್ನೇ ಖರೀದಿ ಮಾಡಿದ್ದಾರೆ. ಗ್ರಾಮವನ್ನೇ ಖರೀದಿ ಮಾಡಿಕೊಂಡಿದ್ದಾರೆ. ಗ್ರಾಮವನ್ನು ಖಾಲಿ ಮಾಡಿ ಸರಕಾರ ಅವರಿಗೆ ಒಪ್ಪಿಸಬೇಕಾಗಿದೆ ಎಂದು ಟೀಕಿಸಿದರು. ಒಂದು ಕಡೆ ಕಾನೂನು- ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಎಲ್ಲಿ ನೋಡಿದರೂ ಅತ್ಯಾಚಾರ, ಬೀದಿ ಬೀದಿಗಳಲ್ಲಿ ಕೊಲೆ ನಡೆಯುತ್ತಿದೆ. ಬಿಜಾಪುರದಲ್ಲಿ ಹೊರರಾಜ್ಯದಿಂದ ಬಂದ ಕೆಲಸಗಾರರನ್ನು ಅಮಾನುಷವಾಗಿ ಹೊಡೆದ ಘಟನೆ ನಡೆದಿದೆ. ಒದೆ ಕೊಟ್ಟವರನ್ನು ರಕ್ಷಿಸಲು ಕಾಂಗ್ರೆಸ್ ನಾಯಕರು ಮುಗಿಬೀಳುತ್ತಿದ್ದಾರೆ ಎಂದು ಖಂಡಿಸಿದರು.