ಹಾಲಿಗೆ ಶೇ.5 ರಷ್ಟು ಜಿಎಸ್ಟಿ ತೆರಿಗೆಯಿದ್ದರೆ ಕಂಡೆನ್ಸ್ ಹಾಲಿಗೆ (ಮಂದಗೊಳಿಸಿದ ಅಥವಾ ನೀರಿನಾಂಶ ತೆಗೆದ) ಶೇ.12 ರಷ್ಟು ದುಬಾರಿ ತೆರಿಗೆ ವಿಧಿಸಲಾಗುತ್ತಿದ್ದು, ಇದನ್ನು ಕಡಿಮೆ ಮಾಡಲು ಕೇಂದ್ರದ ಮೇಲೆ ಒತ್ತಡ ಹೇರುವಂತೆ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ ನೇತೃತ್ವದ ನಿಯೋಗವು ಸಚಿವ ಕೃಷ್ಣಬೈರೇಗೌಡ ಅವರನ್ನು ಮನವಿ ಮಾಡಿದೆ.
ಬುಧವಾರ ವಿಧಾನಸೌಧದಲ್ಲಿ ಕಂದಾಯ ಸಚಿವ ಹಾಗೂ ಜಿಎಸ್ಟಿ ಕೌನ್ಸಿಲ್ನ ಕರ್ನಾಟಕ ಪ್ರತಿನಿಧಿಯಾಗಿರುವ ಕೃಷ್ಣ ಬೈರೇಗೌಡ ಅವರನ್ನು ಭೀಮಾನಾಯ್ಕ ಭೇಟಿ ಮಾಡಿದ್ದರು. ಕಂಡೆನ್ಸ್ಡ್ ಹಾಲಿನ ಮೇಲಿನ ದುಬಾರಿ ತೆರಿಗೆ ಕಡಿಮೆ ಮಾಡಿದರೆ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಕ್ಕೆ ಪ್ರತಿ ವರ್ಷ 30 ಕೋಟಿ ರುಪಾಯಿ ಉಳಿತಾಯವಾಗಲಿದೆ. ಹೀಗಾಗಿ ಜಿಎಸ್ಟಿ ಕೌನ್ಸಿಲ್ನಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿ ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂದು ಕೃಷ್ಣಬೈರೇಗೌಡ ಅವರಿಗೆ ಮನವಿ ಸಲ್ಲಿಸಿದ್ದಾರೆ.