ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಜಟಾಪಟಿ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗೆ ಅವಾಚ್ಯ ಪದಗಳಿಂದ ನಿಂದಿಸಿದ ಆರೋಪದ ಮೇಲೆ ಬಿಜೆಪಿ ಎಂಎಲ್ಸಿ ಸಿ.ಟಿ ರವಿ ಮೇಲೆ ಸುವರ್ಣಸೌಧದಲ್ಲೇ ಹಲ್ಲೆಗೆ ಯತ್ನಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಳರ್ ಆಪ್ತ ಸೇರಿ 10 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಳರ್ ವಿರುದ್ಧ ಸಿ.ಟಿ ರವಿ ಅವಾಚ್ಯ ಪದ ಬಳಕೆ ಆರೋಪ ಕೇಳಿಬಂದ ಬಳಿಕ ಸುವರ್ಣಸೌಧದಲ್ಲಿ ಸದ್ದುಗದ್ದಲ ಜೋರಾಗಿ ನಡೆದಿತ್ತು.
ಲಕ್ಷ್ಮಿ ಹೆಬ್ಬಾಳ್ಳರ್ ಬೆಂಬಲಿಗರು ಬೆಳಗಾವಿಯ ಸುವರ್ಣಸೌಧದೊಳಗೆ ನುಗ್ಗಿ ಸಿಟಿ ರವಿ ವಿರುದ್ದ ಹಲ್ಲೆಗೆ ಯತ್ನಿಸಿದ್ದರು. ಇದರ ಜೊತೆಗೆ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಸಿಟಿ ರವಿ ವಿರುದ್ದ ಪ್ರಕರಣ ದಾಖಲಾಗಿತ್ತು, ಈ ಹಿನ್ನೆಲೆಯಲ್ಲಿ ಸಿಟಿ ರವಿ ಅರೆಸ್ಟ್ ಆಗಿದ್ದರು. ಬಳಿಕ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಿಟಿ ರವಿ ಬಿಡುಗಡೆಗೆ ಆದೇಶಿಸಿತು. ಇದೀಗ ಸಿ.ಟಿ ರವಿ ಕಾನೂನು ಸಮರಕ್ಕೆ ಮುಂದಾಗಿದ್ದಾರೆ.
ಬೆಳಗಾವಿಯ ಖಾನಾಪುರ ಪೊಲೀಸ್ ಠಾಣೆಗೆ ಸಿ.ಟಿ ರವಿ ಲಿಖಿತ ದೂರು ಸಲ್ಲಿಸಿದ್ದರು. ಈ ಪ್ರಕರಣವನ್ನು ಹಿರೇಬಾಗೇವಾಡಿ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ಭಾನುವಾರ ಸಿ.ಟಿ ರವಿ ಅವರು ನೀಡಿದ್ದ ಲಿಖಿತ ದೂರಿನ ಪ್ರತಿ ಪೋಸ್ಟ್ ಮೂಲಕ ಹಿರೇಬಾಗೇವಾಡಿ ಪೊಲೀಸರ ಕೈ ಸೇರಿದ ಬೆನ್ನಲ್ಲೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹೀಗಾಗಿ 10 ಜನರ ವಿರುದ್ದ ಎಫ್ ಐ ಆರ್ ದಾಖಲಾಗಿದೆ.