ಬೆಂಗಳೂರು: ನಮ್ಮಪಕ್ಷ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆಗಳನ್ನು ನೀಡುತ್ತೇವೆ ಎಂದು ಜನರಿಗೆ ಮನೆಮನೆಗೆ ಹೋಗಿ ಭರವಸೆ ಕೊಟ್ಟಿದ್ದೆವು. 40 ಪರ್ಸೆಂಟ್ ಆರೋಪ ಮಾಡಿ ಅಧಿಕಾರಕ್ಕೆ ಬಂದಿದ್ದೇವೆ ಎಂಬುದು ಸುಳ್ಳು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರು ಹೇಳಿದರು.
ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿ. ಪರಮೇಶ್ವರ್ ಅವರು, ಗುತ್ತಿಗೆದಾರರ ಸಂಘದ ಅಧ್ಯಕ್ಷರಾಗಿದ್ದ ಕೆಂಪಣ್ಣ ಅವರು ಅಂದಿನ ರಾಜ್ಯ ಸರ್ಕಾರದ ವಿರುದ್ಧ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು. ಭ್ರಷ್ಟಚಾರ ಜಾಸ್ತಿಯಾಗಿದೆ. ಕಾಮಗಾರಿಗಳಲ್ಲಿ ಹಣ ತೆಗೆದುಕೊಳ್ಳುತ್ತಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದ ಆಧಾರದ ಮೇಲೆ ನಾವು 40 ಪರ್ಸೆಂಟ್ ಆರೋಪ ಮಾಡಿದ್ದೇವೆ.
ನೋಂದಾಯಿತ ಸಂಘವು ಅಧಿಕೃತವಾಗಿ ಪ್ರಧಾನಮಂತ್ರಿಗಳಿಗೆ ಪತ್ರ ಬರೆದಾಗ ನಾವು ಕೂಡ ಪಕ್ಷವಾಗಿ ಜನರ ಹಿತ ದೃಷ್ಟಿಯಿಂದ ಪ್ರಶ್ನೆ ಮಾಡಿದ್ದೇವೆ. ಯಾವ ಆಧಾರದ ಮೇಲೆ 40 ಪರ್ಸೆಂಟ್ ನಡೆದಿಲ್ಲ ಎನ್ನುತ್ತಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಚುನಾವಣೆ ಸಂದರ್ಭದಲ್ಲಿ ಜನಗಳಿಗೆ ಗ್ಯಾರಂಟಿ ಯೋಜನೆಗಳನ್ನು ಕೊಡುತ್ತೇವೆ ಎಂದು ನಾವು ಭರವಸೆ ಕೊಟ್ಟಿದ್ದೇವೆ. ಬರೀ 40 ಪರ್ಸೆಂಟ್ ಆರೋಪದಿಂದ ನಾವು ಅಧಿಕಾರಕ್ಕೆ ಬಂದಿದ್ದೇವೆ ಎಂಬುದು ಸುಳ್ಳು ಎಂದರು.
ವಕ್ಫ್ ವಿಷಯವನ್ನು ಬಿಜೆಪಿಯವರು ರಾಜಕೀಯ ಅಸ್ತ್ರವಾಗಿ ಉಪಯೋಗ ಮಾಡಿಕೊಳ್ಳುತ್ತಿದ್ದಾರೆ. ಕೋಮುಗಲಭೆ, ಶಾಂತಿ ಹಾಳು ಮಾಡಲು ಅವರು ಏನಾದರು ಮಾಡಬಹುದು. ಅದಕ್ಕಾಗಿ ಪಾದಯಾತ್ರೆ ಮಾಡುತ್ತಿದ್ದಾರೆ. ಮುಂದಕ್ಕೆ ಯಾವರೀತಿ ತೆಗೆದುಕೊಳ್ಳುತ್ತದೆ ಎಂದು ಈಗ ಊಹೆ ಮಾಡಲು ಆಗುವುದಿಲ್ಲ ಎಂದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಿಸಿ ರಾಷ್ಟ್ರಪತಿ ಆಡಳಿತ ಹೇರುವ ಬಿಜೆಪಿಯವರ ಪ್ರಯತ್ನದ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅದೆಲ್ಲ ಸಾಧ್ಯವಿಲ್ಲ. ಪೊಲೀಸ್ ಇಲಾಖೆಯು ಸಮರ್ಥವಾಗಿ ಕಳೆದ ಒಂದೂವರೆ ವರ್ಷದಿಂದ ಶಾಂತಿಯನ್ನು ಕಾಪಾಡಿಕೊಂಡು ಬಂದಿದ್ದೇವೆ. ರಾಜ್ಯದಲ್ಲಿ ಶಾಂತಿ ಕದಡಲು ಅಥವಾ ಶಾಂತಿ ಭಂಗ ಮಾಡಲು ಪ್ರಯತ್ನಿಸಿದರೆ ಕಠಿಣವಾಗಿ ಕ್ರಮ ತೆಗೆದುಕೊಳ್ಳುತ್ತೇವೆ. ಅಷ್ಟು ಸುಲಭವಾಗಿ ಬಿಟ್ಟುಬಿಡುತ್ತೇವೆಯೇ ಎಂದು ಎಚ್ಚರಿಸಿದರು.
ಶಾಸಕರಿಗೆ 50 ಕೋಟಿ ರೂ. ಆಮಿಷದ ಕುರಿತು ಸಿಎಂ ಆರೋಪಕ್ಕೆ ಬಿಜೆಪಿಯವರು ದಾಖಲೆ ಕೇಳಿರುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಜ್ಯ ಸರ್ಕಾರದ ವಿರುದ್ಧ ಮಾಡಿರುವ 200 ಕೋಟಿ ರೂ. ಆರೋಪಕ್ಕೆ ದಾಖಲೆ ಕೊಟ್ಟಿದ್ದಾರೆಯೇ? ಇನ್ನಷ್ಟು ಜೋರಾಗಿ ಪ್ರತಿಭಟನೆ ಮಾಡುತ್ತೇವೆ, ರೂ. 200 ಕೋಟಿ ಆರೋಪಕ್ಕೆ ದಾಖಲೆಗಳನ್ನು ಕೊಡಿ ಎಂದು ರಾಜ್ಯ ಬಿಜೆಪಿ ಮುಖಂಡರು ಪ್ರಧಾನಮಂತ್ರಿಯನ್ನು ಕೇಳಲಿ. ಆನಂತರ ನಾವು ದಾಲೆಗಳನ್ನು ಕೊಡುತ್ತೇವೆ ಎಂದು ಟೀಕಿಸಿದರು.
ಮಹಾರಾಷ್ಟ್ರ ಚುನಾವಣೆಯಲ್ಲಿ ಮಹಾವಿಕಾಸ್ ಅಘಾಡಿ ಮೈತ್ರಿಕೂಟ ಗೆಲ್ಲುತ್ತದೆ. ಬಿಜೆಪಿಯವರು ರಾಜ್ಯದ ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡಿರುವುದಕ್ಕೆ ದಾಖಲೆಗಳು ಬೇಕಲ್ಲವೇ? ಕಠಿಣವಾಗಿ ಕ್ರಮ ತೆಗೆದುಕೊಳ್ಳುತ್ತೇವೆ ಕೇಸ್ ದಾಖಲಿಸುವುದಾಗಿ ಎಂದು ಸಿಎಂ ಹೇಳಿದ್ದಾರೆ. ಗೃಹಲಕ್ಷ್ಮೀ ಯೋಜನೆಯಡಿ ಮಹಿಳೆಯರಿಗೆ 2 ಸಾವಿರ ರೂ, ಶಕ್ತಿ ಯೋಜನೆಯಲ್ಲಿ 3.50 ಕೋಟಿ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ಇದಕ್ಕೆ ಏನು ಮಾಡಿಲ್ಲ ಎಂದು ಹೇಳಿದರೆ ಹೇಗೆ ಎಂದು ಪ್ರಶ್ನಿಸಿದರು.