ಬೆಂಗಳೂರು: ಕಾಂಗ್ರೆಸ್ ಪಕ್ಷದ ಪ್ರಧಾನಿಯಾಗಿದ್ದ ಶ್ರೀಮತಿ ಇಂದಿರಾ ಗಾಂಧಿಯವರು ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿ ಡಾ.ಬಿ.ಆರ್.ಅಂಬೇಡ್ಕರ್ ಅವರು ನಮಗೆ ಕೊಟ್ಟ ಮೂಲಭೂತ ಹಕ್ಕನ್ನು ಅಮಾನತು ಪಡಿಸಿದ್ದರಲ್ಲವೇ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಅವರು ಪ್ರಶ್ನಿಸಿದರು.
ಬಿಜೆಪಿ ವತಿಯಿಂದ ಕೆ.ಆರ್.ಪುರ ಮಂಡಲದ ಮಾಜಿ ಸಚಿವ ಬೈರತಿ ಬಸವರಾಜ್ ಅವರ ಮನೆಯಲ್ಲಿ ಇಂದು ನಡೆದ ‘ಭೀಮ ಸಂಗಮ ಅಭಿಯಾನ’ದಲ್ಲಿ ಅವರು ಮಾತನಾಡಿದರು. ದಲಿತ ಮುಖಂಡರು, ದಲಿತ ವಿದ್ಯಾರ್ಥಿಗಳು, ದಲಿತ ವಕೀಲರು ಇದರ ಬಗ್ಗೆ ಬೆಳಕು ಚೆಲ್ಲಬೇಕಲ್ಲವೇ? ಅಯ್ಯೋ ಅಂಬೇಡ್ಕರರು ಯಾವುದಕ್ಕಾಗಿ ಪ್ರಾಣ ಬಿಟ್ಟರೋ ಅದನ್ನು ಇಂದಿರಾ ಗಾಂಧಿಯವರು ಸ್ವಾತಂತ್ರ್ಯದ ಬಳಿಕ ಕಿತ್ತುಕೊಂಡರಲ್ಲವೇ? ಮೂಲಭೂತ ಹಕ್ಕನ್ನೇ ಅಮಾನತು ಪಡಿಸಿದ್ದರಲ್ಲವೇ? ಇದು ನಮ್ಮ ಮನಸ್ಸಿಗೆ ಹೋಗಿದೆಯೇ ಎಂದು ಕೇಳಿದರು.
ದಲಿತರಿಗೆ ಮೀಸಲಿಟ್ಟ ಎಸ್ಇಪಿ, ಟಿಎಸ್ಪಿ ಹಣದಲ್ಲಿ ಕಳೆದ ಸಾರಿ 11 ಸಾವಿರ ಕೋಟಿ, ಈ ಸಾರಿ 14 ಸಾವಿರ ಕೋಟಿ ಒಟ್ಟು ಸೇರಿ 25 ಸಾವಿರ ಕೋಟಿಯನ್ನು ಕಾಂಗ್ರೆಸ್ಸಿನವರು ದುರ್ಬಳಕೆ ಮಾಡಿಕೊಂಡಿದ್ದಾರೆ. ಎಸ್ಸಿ, ಎಸ್ಟಿ ಸಮುದಾಯವರ ಉದ್ಯಮ, ವ್ಯಾಪಾರ, ಅಭಿವೃದ್ಧಿ ಮತ್ತಿತರ ಉದ್ದೇಶಕ್ಕೆ ಬಳಕೆ ಆಗಬೇಕಿದ್ದ ಈ ಹಣವನ್ನು ಕೊಟ್ಟಿದ್ದರೆ ಎಷ್ಟು ದಲಿತ ಕುಟುಂಬಗಳು ಮುಂದೆ ಬರುತ್ತಿದ್ದವು ಎಂದು ಪ್ರಶ್ನೆಯನ್ನು ಮುಂದಿಟ್ಟರು. ಅದನ್ನು ಗ್ಯಾರಂಟಿಗಾಗಿ ಬಳಸಿದರಲ್ಲವೇ? ನಾವು ಮಾತನಾಡುತ್ತಿದ್ದೇವಾ ಎಂದು ಕೇಳಿದರು.
ಯಾರು ಹಿತವರು ನಮಗೆ ಈ ದುಷ್ಟರ ಕೂಟದೊಳಗೆ? ಕತ್ತಿ ಪರರದಾದರೆ ಹಾವೇ? ನಮ್ಮವರೇ ನಮಗೆ ತಿವಿದರೆ? ಅದು ನಮಗೆ ಹೂವೇ ಎಂದು ಪ್ರಶ್ನೆಯನ್ನೂ ಮುಂದಿಟ್ಟರು. ನಮ್ಮ ಸಮುದಾಯಕ್ಕೆ ಮೀನು ಕೊಡಬೇಡಿ. ಮೀನು ಹಿಡಿಯುವುದನ್ನು ಕಲಿಸಿ ಎಂದು ಡಾ. ಅಂಬೇಡ್ಕರರು ತಿಳಿಸಿದ್ದರು. ನಿಮ್ಮ ಭಿಕ್ಷೆ ಬೇಕಿಲ್ಲ; ಅವನ ಸಾಮಥ್ರ್ಯವನ್ನು ಅವನು ಬೆಳೆಸಿಕೊಳ್ಳುವುದನ್ನು ಕಲಿಸಿ ಎಂದಿದ್ದರು ಎಂದು ಗಮನ ಸೆಳೆದರು.
ಎಸ್ಸಿ, ಎಸ್ಟಿಗಳು ಬಡವರೇ ಇರಬೇಕು; ಯಾಕೆಂದರೆ ಅವರಿಗೊಂದು ಮತಬ್ಯಾಂಕ್ ಬೇಕು ಎಂಬ ಧೋರಣೆ ಕಾಂಗ್ರೆಸ್ಸಿನದು. ಎಸ್ಸಿ, ಎಸ್ಟಿಗಳು ಕೋಟ್ಯಧಿಪತಿ, ಕೈಗಾರಿಕೋದ್ಯಮಿ ಆಗಬಾರದು; ಕರ್ನಾಟಕದಲ್ಲಿ 25 ಸಾವಿರ ಕೋಟಿಯನ್ನು ಕೈಗಾರಿಕೆಗಳ ಅಭಿವೃದ್ಧಿಗೆ ಕೊಟ್ಟಿದ್ದರೆ ಎಷ್ಟು ಸಾವಿರ ದಲಿತ ಕುಟುಂಬಗಳು ಉದ್ಯಮಿಗಳಾಗುತ್ತಿದ್ದರು? ಎಷ್ಟು ಲಕ್ಷ ದಲಿತ ಯುವಕರಿಗೆ ಕೆಲಸ ಸಿಗುತ್ತಿತ್ತು ಎಂದು ಕೇಳಿದರು.
ಮಾಜಿ ಸಚಿವ ಬೈರತಿ ಬಸವರಾಜ್ ಅವರು ಮಾತನಾಡಿ, ಸಂವಿಧಾನ ಬದಲಿಸುವ ಕುರಿತು, ಸಂವಿಧಾನ ರದ್ದು ಮಾಡುತ್ತಾರೆಂದು ಅನೇಕ ಅಪಪ್ರಚಾರ ಮಾಡುತ್ತಿದ್ದಾರೆ. ಯಾವತ್ತೂ ಕೂಡ, ಯಾರೂ ಕೂಡ ಸಂವಿಧಾನವನ್ನು ಬದಲಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು. ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಮಾನ್ಯ ಸಂತೋಷ್ ಜೀ ಅವರ ಆದೇಶದಂತೆ ರಾಜ್ಯದಲ್ಲಿ ಸಂವಿಧಾನದ ಅರಿವು, ಜಾಗೃತಿ ಅಭಿಯಾನ ನಡೆಯಲಿದೆ. ಅಂಥ ಪ್ರಥಮ ಕಾರ್ಯಕ್ರಮ ಇಲ್ಲಿ ಇದೀಗ ನಡೆಯುತ್ತಿದೆ ಎಂದು ಅವರು ಹೇಳಿದರು. ಹಿಂದೆ ಮಲ ಹೊರುವ ಪದ್ಧತಿ ಇತ್ತು; ಮನೆಯೊಳಗೆ ಕೂಡ ಪ್ರವೇಶ ಇರಲಿಲ್ಲ. ದೇವಸ್ಥಾನಗಳಿಗೆ ದಲಿತರಿಗೆ ಹೋಗಲು ಅವಕಾಶ ಇರಲಿಲ್ಲ; ಇವತ್ತು ಆ ಪರಿಸ್ಥಿತಿ ಇಲ್ಲ. ಎಲ್ಲರೂ ಕೂಡ ಒಂದೇ ಎಂಬ ಭಾವನೆ ಬರುತ್ತಿದೆ ಎಂದು ವಿಶ್ಲೇಷಿಸಿದರು.
ಬಿಜೆಪಿ ದಲಿತ ವಿರೋಧಿ ಎಂಬ ಹಣೆಪಟ್ಟಿ ಕಟ್ಟಲು ಕಾಂಗ್ರೆಸ್ ಪಕ್ಷ ಪ್ರಯತ್ನಿಸುತ್ತಿದೆ. ಇದು ಖಂಡನೀಯ ಎಂದು ಹೇಳಿದರು. ಇಂಥ ವಿಚಾರಗಳ ಕುರಿತು ನಾವು ಮನವರಿಕೆ ಮಾಡಿಕೊಡಬೇಕಿದೆ ಎಂದು ಅವರು ತಿಳಿಸಿದರು. ನಗರ ಜಿಲ್ಲಾಧ್ಯಕ್ಷ ಎಸ್.ಹರೀಶ್, ಕಾರ್ಯಕ್ರಮದ ಸಂಚಾಲಕ ಮುನಿಕೃಷ್ಣ, ರಾಜ್ಯ ಮಹಿಳಾ ಮೋರ್ಚಾ ಮಾಜಿ ಅಧ್ಯಕ್ಷೆ ಗೀತಾ ವಿವೇಕಾನಂದ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಂಗಸ್ವಾಮಿ, ಪ್ರಮುಖರಾದ ಸದಾಶಿವ್, ಚಿದಾನಂದ, ಮುನಿರಾಜು, ಸಂಪತ್, ಮಂಜುಳಾ ಶ್ರೀನಿವಾಸ್, ರಮೇಶ್, ಮಂಡಲದ ಪದಾಧಿಕಾರಿಗಳು ಮತ್ತಿತರ ಮುಖಂಡರು ಭಾಗವಹಿಸಿದ್ದರು.