ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರದಿಂದ ಎರಡು ದಿನಗಳವರೆಗೆ ಪೊಲೆಂಡ್ ದೇಶಕ್ಕೆ ಪ್ರವಾಸ ಕೈಗೊಂಡಿದ್ದಾರೆ. ಪೊಲೆಂಡ್ ಪ್ರಧಾನಿ ಡೊನಾಲ್ಡ್ ಟಸ್ಕ್ ಅವರ ಆಹ್ವಾನದ ಮೇರೆಗೆ ನರೇಂದ್ರ ಮೋದಿ ಅವರು ಇಂದು ಮತ್ತು ನಾಳೆ ಪೊಲೆಂಡ್ಗೆ ಭೇಟಿ ನೀಡಲಿದ್ದಾರೆ. 45 ವರ್ಷಗಳ ನಂತರ ಭಾರತದ ಪ್ರಧಾನಿ ಪೊಲೆಂಡ್ಗೆ ಭೇಟಿ ನೀಡುತ್ತಿರುವ ಕಾರಣ ಇದು ಮಹತ್ವ ಪಡೆದಿದೆ.
ಭಾರತ ಮತ್ತು ಪೊಲೆಂಡ್ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳ ಆರಂಭವಾಗಿ ಇಂದಿಗೆ 70 ವರ್ಷಗಳು ತುಂಬಿವೆ. ಈ ಹಿನ್ನಲೆಯಲ್ಲಿ 70ನೇ ವಾರ್ಷಿಕೋತ್ಸವ ಆಚರಣೆ ಮಾಡಲಾಗುವುದು ಎಂದು ಭಾರತೀಯ ಅಧಿಕಾರಿಗಳು ಹೇಳಿದ್ದಾರೆ. ನರೇಂದ್ರ ಮೋದಿ ಅವರು ಪೊಲೆಂಡ್ ಪ್ರಧಾನಿ ಡೊನಾಲ್ಡ್ ಟಸ್ಕ್, ಅಧ್ಯಕ್ಷರಾದ ಆಂಡ್ರೆಜ್ ದುಡಾ ಅವರನ್ನು ಭೇಟಿಯಾಗಿ ರಾಜತಾಂತ್ರಿಕ ಸಂಬಂಧಗಳ ಕುರಿತು ಚರ್ಚೆ ಮಾಡಲಿದ್ದಾರೆ.
ನಂತರ ವಿವಿಧ ಒಪ್ಪಂದಗಳಿಗೆ ಸಹಿ ಮಾಡಲಿದ್ದಾರೆ ಎಂದು ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಪೊಲೆಂಡ್ನಲ್ಲಿ ಸುಮಾರ 25 ಸಾವಿರಕ್ಕೂ ಹೆಚ್ಚು ಭಾರತೀಯರು ಇಲ್ಲಿ ವಾಸವಾಗಿದ್ದಾರೆ ಎಂದು ಆಂದಾಜಿಸಲಾಗಿದೆ. ಮೋದಿ ತಮ್ಮ ಭೇಟಿ ಸಮಯದಲ್ಲಿ ಭಾರತೀಯ ಸಮುದಾಯದವರು, ವಿದ್ಯಾರ್ಥಿಗಳು, ಉದ್ಯಮಿಗಳು, ಪರಿಸರ ತಜ್ಞರ ಜೊತೆ ಸಮಾಲೋಚನೆ ನಡೆಸಲಿದ್ದಾರೆ ಎಂದು ವರದಿಯಾಗಿದೆ.