ಬೆಂಗಳೂರು ಜಲ ಮಂಡಳಿ ನಷ್ಟದಲ್ಲಿದೆ, ಸಂಕಷ್ಟ ಎದುರಿಸುತ್ತಿದೆ ಎಂದು ನೆನ್ನೆ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದರು. ಆದರೆ, ಅದೇ ದಿನ ರಾತ್ರೋರಾತ್ರಿ ಸಚಿವರ ಗಮನಕ್ಕೂ ಬಾರದಂತೆ 200ಕ್ಕೂ ಹೆಚ್ಚು ಸಿಬ್ಬಂದಿಯನ್ನು ಜಲಮಂಡಳಿ ವರ್ಗಾವಣೆ ಮಾಡಿದೆ. ಸಾಲದ ಸುಳಿಯಲ್ಲಿರುವ ಜಲಮಂಡಳಿಗೆ ಹೊರೆಯಾಗಲಿದೆ.
ಬೆಂಗಳೂರು ಜಲಮಂಡಳಿಯಲ್ಲಿ ಒಂದೇ ದಿನ 200 ಕ್ಕೂ ಹೆಚ್ಚು ಮಂದಿಯನ್ನು ವರ್ಗಾವಣೆ ಮಾಡಲಾಗಿದ್ದು, ಹಲವರಿಗೆ ಮುಂಬಡ್ತಿ ನೀಡಲಾಗಿದೆ. ಕೆಲವರಿಗೆ ಡಬಲ್ ಪೋಸ್ಟಿಂಗ್ ಕೊಟ್ಟು ಯಡವಟ್ಟು ಮಾಡಲಾಗಿದೆ. ಬೆಂಗಳೂರು ಉಸ್ತುವಾರಿ ಸಚಿವರ ಗಮನಕ್ಕೂ ತರದೇ ಈ ವರ್ಗಾವಣೆ ನಡೆದಿದೆ. ಹೀಗಾಗಿ, ಇದರ ಹಿಂದೆ ಲಕ್ಷ ಲಕ್ಷ ಡೀಲಿಂಗ್ ನಡೆದಿದೆಯಾ ಎಂಬ ಅನುಮಾನವೂ ವ್ಯಕ್ತವಾಗಿದೆ.
ಒಂದೇ ದಿನ 200ಕ್ಕೂ ಹೆಚ್ಚು ನೌಕರರ ಟ್ರಾನ್ಸ್ಫರ್, ಪೋಸ್ಟಿಂಗ್ ಮಾಡಲಾಗಿದೆ. ನೂರಕ್ಕೂ ಹೆಚ್ಚು ನೌಕರರಿಗೆ ಮುಂಬಡ್ತಿ ನೀಡಿ ಸ್ಥಳ ನಿಯೋಜನೆ ಮಾಡಲಾಗಿದೆ. ಹಲವು ನೌಕರರಿಗೆ ಮಾಪನ ಹುದ್ದೆಯಿಂದ ಜಲಪರೀಕ್ಷಕ ಹುದ್ದೆಗೆ ಮುಂಬಡ್ತಿ ನೀಡಲಾಗಿದೆ. ಜಲಮಂಡಳಿ ಇತಿಹಾಸದಲ್ಲೇ ಈ ರೀತಿ ರಾತ್ರೋರಾತ್ರಿ ವರ್ಗಾವಣೆ ಮಾಡಿರುವುದು ಮೊದಲು ಎನ್ನಲಾಗುತ್ತಿದೆ.
ವಾಟರ್ ಇನ್ಸ್ಪೆಕ್ಟರ್, ಕ್ಲರ್ಕ್, ಹೆಲ್ಪರ್ಗಳಿಗೆ ವರ್ಗಾವಣೆ ಭಾಗ್ಯ ದೊರೆತಿದೆ. ಪೋಸ್ಟಿಂಗ್, ಟ್ರಾನ್ಸ್ಫರ್ನಲ್ಲಿ ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ. ದುಡ್ಡು ಕೊಟ್ಟು ಪೋಸ್ಟಿಂಗ್ ಮಾಡಿಸಿಕೊಳ್ಳಲಾಗಿದೆ ಎನ್ನಲಾಗುತ್ತಿದೆ. ಆಡಳಿತಾಧಿಕಾರಿ ಹಾಗೂ ನೌಕರರ ಸಂಘದ ಅಧ್ಯಕ್ಷರಿಂದ ವರ್ಗಾವಣೆ ದಂಧೆ ನಡೆಯುತ್ತಿದೆ. ಮುಂಬಡ್ತಿಯಿಂದ ಜಲಮಂಡಳಿಗೆ ಹೆಚ್ಚು ಸಂಬಳ ಪಾವತಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಸಾಲದ ಸುಳಿಯಲ್ಲಿರುವ ಜಲಮಂಡಳಿಗೆ ಮುಂಬಡ್ತಿಯ ಹೊರೆ ಉಂಟಾಗಲಿದೆ. ಒಬ್ಬೊಬ್ಬರಿಗೆ ಎರಡೆರಡು ಪೋಸ್ಟಿಂಗ್ ನೀಡಿ ಯಡವಟ್ಟು ಮಾಡಿರುವುದು ಇನ್ನಷ್ಟು ಹೊರೆಯಾಗಲಿದೆ.