ಮುಂಬೈ: ಮುಂಬೈನ ಗೇಟ್ ವೇ ಆಫ್ ಇಂಡಿಯಾ ಬಳಿ ನೋಡ, ನೋಡುತ್ತಿದ್ದಂತೆ ಅತಿ ದೊಡ್ಡ ಅನಾಹುತ ಸಂಭವಿಸಿದೆ. 110 ಪ್ರಯಾಣಿಕರಿದ್ದ ಬೋಟ್ ಸಮುದ್ರದಲ್ಲಿ ಮುಳುಗಡೆಯಾಗಿದೆ. ಕೂಡಲೇ ಮುಂಬೈ ಪೊಲೀಸರು, ನೌಕಾದಳದ ಸಿಬ್ಬಂದಿ ರಕ್ಷಿಸಲು ಹರಸಾಹಸ ಪಟ್ಟರೂ 13 ಮಂದಿಯ ಪ್ರಾಣ ಉಳಿಸಲು ಸಾಧ್ಯವಾಗಿಲ್ಲ.
ಮಹಾರಾಷ್ಟ್ರದ ಮುಂಬೈನ ಗೇಟ್ವೇ ಆಫ್ ಇಂಡಿಯಾ ಬಳಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಹಡಗೊಂದು ಮಗುಚಿ ಬಿದ್ದ ಪರಿಣಾಮ 13 ಮಂದಿ ಸಾವನ್ನಪ್ಪಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಮಾಹಿತಿ ಪ್ರಕಾರ, ಮೃತರಲ್ಲಿ 10 ಪ್ರಯಾಣಿಕರು ಮತ್ತು ಮೂವರು ನೌಕಾಪಡೆ ಸಿಬ್ಬಂದಿ ಸೇರಿದ್ದಾರೆ. ಗೇಟ್ವೇ ಆಫ್ ಇಂಡಿಯಾದಿಂದ ಎಲಿಫೆಂಟಾ ದ್ವೀಪಕ್ಕೆ ಹಡಗಿನಲ್ಲಿ ಪ್ರಯಾಣಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ನಿನ್ನೆ ಸಂಜೆ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಈ ಘಟನೆಯ ನಂತರ, ಪ್ರಯಾಣಿಕರನ್ನು ರಕ್ಷಿಸಲು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ ಎಂದು ಮಹಾರಾಷ್ಟ್ರ ವಿಧಾನಸಭೆಗೆ ಸಿಎಂ ದೇವೇಂದ್ರ ಫಡ್ನವಿಸ್ ಮಾಹಿತಿ ನೀಡಿದ್ದಾರೆ.
ಘಟನೆ ನಡೆದ ಸ್ಥಳದಲ್ಲಿ 4 ಸೇನಾ ಹೆಲಿಕಾಪ್ಟರ್ಗಳು, 11 ನೌಕಾ ಕ್ರಾಫ್ಟ್ಗಳು ಹಾಗೂ 1 ಕೋಸ್ಟ್ಗಾರ್ಡ್ ಬೋಟ್ಗಳು ಬೀಡುಬಿಟ್ಟಿವೆ. 3 ಮೆರೈನ್ ಪೊಲೀಸ್ ಕ್ರಾಫ್ಟ್ಗಳಿಂದ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. 10 ಪ್ರವಾಸಿಗರು, ಮೂವರು ನೌಕಾಪಡೆ ಸಿಬ್ಬಂದಿ ದುರ್ಮರಣವನ್ನಪ್ಪಿದ್ದಾರೆ. ಪ್ರವಾಸಿಗರು ಎಲಿಫೆಂಟಾ ದ್ವೀಪಗಳಿಗೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ನಾಪತ್ತೆಯಾಗಿರುವ 7-8 ಪ್ರಯಾಣಿಕರಿಗಾಗಿ ಶೋಧ ಕಾರ್ಯ ನಡೆದಿದೆ. ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಈ ಘಟನೆಗೆ ಸಂತಾಪ ಸೂಚಿಸಿದ್ದು, ಪರಿಹಾರ ಮೊತ್ತ ಘೋಷಿಸಿದ್ದಾರೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.