ದೇಶದ ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹವು ಮುಂಬೈನಲ್ಲಿ ನಡೆಯಲಿದ್ದು, ನಗರ ಪೊಲೀಸರ ನಿರ್ಧಾರ ಸಾರ್ವಜನಿಕರ ಅಕ್ರೋಶಕ್ಕೆ ಕಾರಣವಾಗಿದೆ.
ಮುಂಬೈ ಸಂಚಾರ ಪೊಲೀಸರು ಜುಲೈ 12 ಮತ್ತು 15 ರ ನಡುವೆ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ ಬಳಿ ರಸ್ತೆ ಸಂಚಾರಕ್ಕೆ ನಿರ್ಬಂಧ ಹೇರಿದ್ದಾರೆ. ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಪೊಲೀಸರು, ರಸ್ತೆಯಲ್ಲಿ ಮಧ್ಯಾಹ್ನ 1 ಮತ್ತು ಮಧ್ಯರಾತ್ರಿಯ ನಡುವೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಜುಲೈ 12 ರಿಂದ 15ರವರೆಗೆ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ನಲ್ಲಿರುವ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ನಲ್ಲಿ ಸಾರ್ವಜನಿಕ ಕಾರ್ಯಕ್ರಮದ ಕಾರಣ, ಸುಗಮ ಸಂಚಾರಕ್ಕಾಗಿ ಈ ಕೆಳಗಿನ ಟ್ರಾಫಿಕ್ ವ್ಯವಸ್ಥೆಗಳು ಜಾರಿಯಲ್ಲಿರುತ್ತವೆ” ಎಂದು ಮುಂಬೈ ಟ್ರಾಫಿಕ್ ಪೋಲೀಸ್ ಎಕ್ಸ್ ಹ್ಯಾಂಡಲ್ನಲ್ಲಿ ಹಂಚಿಕೊಳ್ಳಲಾಗಿದೆ.
ಅಂಬಾನಿ ಕುಟುಂಬದ ವಿವಾಹವನ್ನು “ಸಾರ್ವಜನಿಕ ಕಾರ್ಯಕ್ರಮ” ಎಂದು ಕರೆದಿದ್ದಕ್ಕಾಗಿ ಪೊಲೀಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಾಮಾಜಿಕ ಮಾಧ್ಯಮ ಬಳಕೆದಾರರು ಮತ್ತು ಮುಂಬೈ ನಿವಾಸಿಗಳು ಪ್ರತಿಕ್ರಿಯಿಸಿದ್ದು, “ಇದು ಸಾರ್ವಜನಿಕ ಕಾರ್ಯಕ್ರಮವಾಗಿದ್ದರೆ ಪತ್ರಿಕಾ ಟಿಪ್ಪಣಿಯನ್ನು ಅನುಸರಿಸಿ ಮುಂಬೈ ಜನರು ಕಾರ್ಯಕ್ರಮಕ್ಕೆ ಭೇಟಿ ನೀಡಬೇಕು, ಉತ್ತಮ ಆಹಾರ ಸೇವಿಸಬೇಕು ಮತ್ತು ದಂಪತಿಗಳನ್ನು ಆಶೀರ್ವದಿಸಬೇಕು” ಎಂದು ಬರೆದಿದ್ದಾರೆ ಲೇವಡಿ ಮಾಡಿದ್ದಾರೆ. “ಮುಂಬೈ ಪೋಲೀಸ್ ಇಲಾಖೆಯು ಎಷ್ಟು ವ್ಯರ್ಥವಾಗಿದೆ. ಅವರು ಖಾಸಗಿ ವಿವಾಹವನ್ನು ಸಾರ್ವಜನಿಕ ಕಾರ್ಯಕ್ರಮವೆಂದು ಪರಿಗಣಿಸುತ್ತಾರೆ, ಇದು ಕರುಣಾಜನಕ” ಎಂದು ಮತ್ತೊಬ್ಬ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.
“ಇದು ಅಸಂಬದ್ಧವಾಗಿದೆ ನೀವು ಜನರಿಗೆ ಅನಾನುಕೂಲತೆಯನ್ನುಂಟುಮಾಡುವುದು ಮತ್ತು ಖಾಸಗಿ ಕಾರ್ಯಕ್ರಮಕ್ಕಾಗಿ ಜನರು ಕಚೇರಿಗೆ ಬರದಂತೆ ತಡೆಯುವುದು ಹೇಗೆ? ಕಚೇರಿ ಸಮಯದ ನಂತರ ಕಾರ್ಯಕ್ರಮವನ್ನು ಏಕೆ ನಡೆಸಬಾರದು? ಈಗಾಗಲೇ ಈ ಕಾರ್ಯಕ್ರಮಕ್ಕಾಗಿ ಸಾರ್ವಜನಿಕ ರಸ್ತೆಗಳನ್ನು ಅತಿಕ್ರಮಿಸಿರುವುದರಿಂದ ಸಂಚಾರ ಅಸ್ತವ್ಯಸ್ತವಾಗಿದೆ” ಎಂದು ಮೂರನೇ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. “ಯಾವ ಸಾರ್ವಜನಿಕ ಕಾರ್ಯಕ್ರಮ?” ಎಂದು ಮನ್ನೊಬ್ಬ ಬಳಕೆದಾರರು ಪೊಲೀಸರನ್ನು ಪ್ರಶ್ನಿಸಿದ್ದಾರೆ. ಮುಂಬೈ ಟ್ರಾಫಿಕ್ ಪೊಲೀಸರನ್ನು ದೂಷಿಸಿದ ಚಲನಚಿತ್ರ ನಿರ್ಮಾಪಕ-ಹಾಸ್ಯಗಾರ ವರುಣ್ ಗ್ರೋವರ್, “ರಾಜಪ್ರಭುತ್ವವು ಅರಾಜಕತೆಯನ್ನು ಸೃಷ್ಟಿಸುತ್ತಿದೆ” ಎಂದು ಕಿಡಿಕಾರಿದ್ದಾರೆ.
“ರೈತರು ತಮ್ಮ ಹಕ್ಕುಗಳಿಗಾಗಿ ಮೆರವಣಿಗೆ ನಡೆಸಿದಾಗ, ಇಡೀ ಮಾಧ್ಯಮಗಳು ಮತ್ತು ನಗರದ ಗಣ್ಯರು ಸಂಚಾರ ಅನಾನುಕೂಲತೆಯ ಬಗ್ಗೆ ಅಳಲು ತೋಡಿಕೊಂಡಿದ್ದಾರೆ. ಆದರೆ ಕೋಟ್ಯಾಧಿಪತಿಯ ವಿವಾಹವು ಸಂಚಾರಕ್ಕೆ ಅಡ್ಡಿಪಡಿಸುತ್ತದೆ, ಇದನ್ನು ಸಾರ್ವಜನಿಕ ಕಾರ್ಯಕ್ರಮ ಎಂದು ಕರೆಯಲಾಗುತ್ತದೆ” ಎಂದು ಪತ್ರಕರ್ತ ಪಾರ್ಥ್ ಎಂಎನ್ ಆಕ್ರೋಶ ಹೊರಹಾಕಿದ್ದಾರೆ.