ವಾಣಿಜ್ಯ ನಗರಿ ಮುಂಬೈ ಯಲ್ಲಿ ದಾಖಲೆಯ ಮಳೆಯಾಗುತ್ತಿದ್ದು ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಭಾನುವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ರೈಲು ಹಳಿಗಳು ಜಲಾವೃತಗೊಂಡಿದ್ದು ಪರಿಣಾಮ ಹಲವಾರು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಅಲ್ಲದೆ ಪ್ರಮುಖ ರಸ್ತೆಗಳಲ್ಲಿ ನೀರು ನಿಂತು ವಾಹನ ಸವಾರರು ಪರದಾಡುವಂತಾಗಿದೆ.
ರೈಲು ಸಂಚಾರಕ್ಕೆ ಎಲ್ಲೆಲ್ಲಿ ಪರಿಣಾಮ ಬೀರಿದೆ ಎಂದು ನೋಡೂದಾದ್ರೆ ಭಾಂಡೂಪ್ ನಿಲ್ದಾಣದಲ್ಲಿ ರೈಲು ಹಳಿ ಜಲಾವೃತವಾಗಿದೆ. ಇದರಿಂದ ಸೆಂಟ್ರಲ್ ರೈಲ್ವೇ ಸಂಚಾರಕ್ಕೆ ತೊಂದರೆಯಾಗಿದೆ. ಕುರ್ಲಾ-ಮಾನ್ಖುರ್ದ್ ನಿಲ್ದಾಣದ ರೈಲ್ವೆ ಹಳಿ ಜಲಾವೃತಗೊಂಡಿದ್ದು ಪರಿಣಾಮ ಹಾರ್ಬರ್ ಮಾರ್ಗದಲ್ಲಿ ಸಂಚರಿಸುವ ಸ್ಥಳೀಯ ರೈಲುಗಳನ್ನು ರದ್ದುಗೊಳಿಸಲಾಗಿದೆ. ವಡಾಲಾದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ನಿಂತ ನಿಟ್ಟಿನಲ್ಲಿ ಗೋರೆಗಾಂವ್ – ಸಿಎಎಂಟಿ ಲೋಕಲ್ ರೈಲನ್ನು ಮುಂದಿನ ಸೂಚನೆ ಬರುವವರೆಗೆ ಸಂಪೂರ್ಣವಾಗಿ ಮುಚ್ಚಲಾಗಿದೆ. ಹಲವಾರು ಪ್ರದೇಶಗಳು ಮಳೆಯ ಹೊಡೆತಕ್ಕೆ ಸಿಲುಕಿದೆ, ಅಲ್ಲದೆ ಪ್ರಮುಖ ರಸ್ತೆಗಳು ನೀರಿನಿಂದ ಆವೃತಗೊಂಡಿದ್ದರಿಂದ ವಾಹನ ಸವಾರರು ತೊಂದರೆ ಅನುಭವಿಸಿದ್ದಾರೆ.
ಭಾನುವಾರ ಮಧ್ಯರಾತ್ರಿಯಿಂದ ಸತತ ಆರು ಗಂಟೆಗಳ ಅವಧಿಯಲ್ಲಿ ವಿವಿಧೆಡೆ 300 ಮಿಲಿಮೀಟರ್ಗೂ ಹೆಚ್ಚು ಮಳೆ ದಾಖಲಾಗಿದೆ. ಭಾರೀ ಮಳೆಯಿಂದಾಗಿ ಕೆಲವು ತಗ್ಗು ಪ್ರದೇಶಗಳಲ್ಲಿ ಜಲಾವೃತವಾಗಿದೆ ಮತ್ತು ಉಪನಗರ ರೈಲು ಸೇವೆಗಳು ಸಹ ಅಸ್ತವ್ಯಸ್ತವಾಗಿದೆ ಎಂದು ಮುಂಬೈ ಪಾಲಿಕೆ ತಿಳಿಸಿದೆ.