ಅಕ್ಟೋಬರ್ 9ರಂದು ನಿಧನರಾದ ರತನ್ ಟಾಟಾ ಅವರಿಗೆ ಗೌರವ ಸೂಚಿಸುವ ಭರದಲ್ಲಿ, ತಪ್ಪಾದ ಪದಬಳಕೆ ಮಾಡಿ ಪೇಟಿಎಂ ಸಿಇಒ ವಿಜಯ್ ಶೇಖರ್ ಶರ್ಮಾ ಯಡವಟ್ಟು ಮಾಡಿಕೊಂಡಿದ್ದಾರೆ. ಅವರು ಶ್ರೀಮಂತ ವಾಣಿಜ್ಯೋದ್ಯಮಿ, ಸೆಲೆಬ್ರಿಟಿಯಾಗಿದ್ದ ಕಾರಣ, ಗಣ್ಯಾತಿಗಣ್ಯರು, ಸಿನಿಮಾ ಸೆಲೆಬ್ರಿಟಿಗಳು, ರಾಜಕೀಯ ವ್ಯಕ್ತಿಗಳು, ಉದ್ಯಮಿಗಳೆಲ್ಲರೂ ಅವರ ನಿಧನಕ್ಕೆ ತಮ್ಮದೇ ಆದ ರೀತಿಯಲ್ಲಿ ಸಂತಾಪ ಸೂಚಿಸಿದ್ದಾರೆ. ಆದರೆ ಪೇಟಿಎಂ ಸಿಇಓ ಶೇಖರ್ ಶರ್ಮಾ, ರತನ್ ಟಾಟಾ ನಿಧನಕ್ಕೆ ಸಂತಾಪ ಸೂಚಿಸಲು ಹೋಗಿ, ಯಡವಟ್ಟು ಮಾಡಿಕೊಂಡಿದ್ದಾರೆ. ಇವರ ಯಡವಟ್ಟಿಗೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದು, ಇದೆಂತ ರೀತಿಯ ಸಂತಾಪವೆಂದು ಬೈದಿದ್ದಾರೆ.
ಪೇಟಿಎಂ ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ ಅವರ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಎಕ್ಸ್ ಬಳಕೆದಾರರ ಗಮನ ಸೆಳೆಯಿತು. ಅನೇಕ ಶ್ರದ್ಧಾಂಜಲಿಗಳನ್ನು ಶ್ಲಾಘಿಸಲಾಗಿದ್ದರೂ, ವಿಜಯ್ ಶೇಖರ್ ಶರ್ಮಾ ಅವರ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಗಳಿಸಲಿಲ್ಲ. ಪೇಟಿಎಂನ ಸಿಇಒ ನಿರ್ದಿಷ್ಟ ಹೇಳಿಕೆಗಾಗಿ ಟೀಕೆಗಳನ್ನು ಎದುರಿಸಬೇಕಾಯಿತು.
“ಪ್ರತಿ ಪೀಳಿಗೆಗೆ ಸ್ಫೂರ್ತಿ ನೀಡುವ ದಂತಕಥೆ. ಮುಂದಿನ ಪೀಳಿಗೆಯ ಉದ್ಯಮಿಗಳು ಭಾರತದ ಅತ್ಯಂತ ವಿನಮ್ರ ಉದ್ಯಮಿಯೊಂದಿಗೆ ಸಂವಹನ ನಡೆಸುವುದನ್ನು ತಪ್ಪಿಸಿಕೊಳ್ಳುತ್ತಾರೆ. ಸೆಲ್ಯೂಟ್ಸ್, ಸರ್. ಓಕೆ ಟಾಟಾ ಬೈ ಬೈ” ಎಂದು ಶರ್ಮಾ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದರಿಂದಾಗಿ ಅವರು ತಮ್ಮ ಪೋಸ್ಟ್ ತೆಗೆದುಹಾಕಲು ಕಾರಣವಾಯಿತು. ಶರ್ಮಾ ಅವರ ಅಳಿಸಿದ ಶ್ರದ್ಧಾಂಜಲಿಯ ಸ್ಕ್ರೀನ್ಶಾಟ್ ನಂತರ ಎಕ್ಸ್ನಲ್ಲಿ ವೈರಲ್ ಆಗಿದೆ. ಇವರೊಬ್ಬ ಉದ್ಯಮಿಯಾಗಿ, ಈ ರೀತಿಯಾಗಿ ನಡೆದುಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಎಂದು ಜನ ಬೈದಿದ್ದಾರೆ.
ಆ ನಂತರ ಅವರು ಮತ್ತೊಂದು ಪೋಸ್ಟ್ ಹಾಕಿದ್ದು, ಓಕೆ ಟಾಟಾ ಬೈ ಬೈ ಪದಬಳಕೆ ಬದಲು ‘ನಮ್ಮ ಹೃದಯದಲ್ಲಿ ನೀವು ಸದಾ ಇರುವಿರಿ’ ಎಂದು ಬರೆದು ತಪ್ಪು ಸರಿ ಮಾಡಿಕೊಂಡಿದ್ದಾರೆ.