ಮುಂಬಯಿ: ಬಿಎಂಡಬ್ಲ್ಯು ಕಾರೊಂದು ಬೈಕಿನಲ್ಲಿ ಹೋಗುತ್ತಿದ್ದ ದಂಪತಿಗೆ ಢಿಕ್ಕಿ ಹೊಡೆದ ಪರಿಣಾಮ ಮಹಿಳೆ ಮೃತಪಟ್ಟಿರುವ ಘಟನೆ ಮುಂಬೈಯ ವರ್ಲಿಯಲ್ಲಿ ಭಾನುವಾರ ಮುಂಜಾನೆ ನಡೆದಿದೆ. ಕೋಳಿವಾಡ ಪ್ರದೇಶದ ನಿವಾಸಿಗಳಾದ ದಂಪತಿ ಮುಂಜಾನೆ ಮಾರುಕಟ್ಟೆಯಿಂದ ಮೀನು ಖರೀದಿಸಿ ಬೈಕ್ ನಲ್ಲಿ ವಾಪಾಸ್ ಆಗುತ್ತಿದ್ದರು. ಈ ವೇಳೆ ಅಟ್ರಿಯಾ ಮಾಲ್ ಬಳಿ ಬಿಎಂಡಬ್ಲ್ಯು ದಂಪತಿಗೆ ಬೈಕ್ ಗೆ ಹಿಂದಿನಿಂದ ಢಿಕ್ಕಿ ಹೊಡೆದಿದೆ.
ಢಿಕ್ಕಿ ಹೊಡೆದ ಪರಿಣಾಮ ವಾಹನದಲ್ಲಿದ್ದ ದಂಪತಿ ಕೆಳಗೆ ಬಿದ್ದಿದ್ದು, ಪತ್ನಿ ಕಾವೇರಿ ನಕವಾ ಮೃತಪಟ್ಟಿದ್ದಾರೆ. ಪತಿ ಗಾಯಗೊಂಡಿದ್ದಾರೆ. ಕಾವೇರಿ ಅವರಿಗೆ ಅಪಘಾತದ ಪರಿಣಾಮ ತೀವ್ರ ಗಾಯಗಳಾಗಿತ್ತು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರೂ, ಚಿಕಿತ್ಸೆ ವೇಳೆ ಅವರು ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ. ಘಟನೆಯ ಬಳಿಕ ಕಾರ ಚಾಲಕ ಪರಾರಿ ಆಗಿದ್ದಾನೆ. ಪರಾರಿಯಾಗಿರುವ ಚಾಲಕನನ್ನು ಮಿಹಿರ್ ಶಾ ಎಂದು ಗುರುತಿಸಲಾಗಿದ್ದು, ಬಂಧನಕ್ಕೆ ಪ್ರಯತ್ನ ಮುಂದುವರೆದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.