- ನೀಟ್ ಪರೀಕ್ಷೆಯಲ್ಲಿ ಗ್ರೇಸ್ ಮಾರ್ಕ್ಸ್ ನೀಡಬಾರದು
- ಹೆದರಿಸಿ ಬೆದರಿಸೋದು ಬಿಜೆಪಿ ಸಂಸ್ಕೃತಿ
- ನಾವು ಸೇಡಿನ ರಾಜಕಾರಣ ಮಾಡೋದಿಲ್ಲ
ಮೈಸೂರು : ಪೋಕ್ಸೊ ಕೇಸ್ನಲ್ಲಿ ಆರೋಪ ಎದುರಿಸುತ್ತಿರುವ ಯಡಿಯೂರಪ್ಪ ಅವರನ್ನು ಕಾಂಗ್ರೆಸ್ ಟಾರ್ಗೆಟ್ ಮಾಡುತ್ತಿದ್ದಾರೆ ಎಂಬ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಬಿಜೆಪಿಯವರು ನನ್ನನ್ನು ಸೇರಿ ರಾಹುಲ್ ಗಾಂಧಿ, ಡಿಕೆಶಿ ವಿರುದ್ಧ ದೂರು ನೀಡಿದ್ದಾರೆ. ಹಾಗಾದರೆ ಇದನ್ನೆಲ್ಲ ಏನೆಂದು ಹೇಳಬೇಕು.ನಾವು ಕ್ರಮ ಕೈಗೊಂಡರೇ ಟಾರ್ಗೆಟ್ ಅಂತಾರೆ. ಅವರು ಮಾಡುತ್ತಿರುವುದು ಏನು? ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು. ಮತ್ತೊಮ್ಮೆ ಹೇಳುತ್ತಿದ್ದೇನೆ ನಾವು ಸೇಡಿನ ರಾಜಕಾರಣ ಮಾಡೋದಿಲ್ಲ. ದ್ವೇಷದ ಪ್ರತೀಕಾರ ತೀರಿಸಿಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ರು.
ನೀಟ್ ಪರೀಕ್ಷೆಯಲ್ಲಿ ಅಕ್ರಮ
ನೀಟ್ ಪರೀಕ್ಷೆಯಲ್ಲಿ ಅಕ್ರಮ ಆರೋಪ ಹಿನ್ನೆಲೆ ನೀಟ್ ಪರೀಕ್ಷೆಯನ್ನು ರದ್ದು ಮಾಡಬೇಕು. ಮತ್ತೊಮ್ಮೆ ನೀಟ್ ಪರೀಕ್ಷೆ ನಡೆಸಬೇಕು. ಈ ಪರೀಕ್ಷೆಯಲ್ಲಿ ಗ್ರೇಸ್ ಮಾರ್ಕ್ಸ್ ನೀಡಬಾರದು ಎಂದು ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ದಕ್ಷಿಣ ಭಾರತದಲ್ಲಿ ಜನ ಬಿಜೆಪಿಯನ್ನು ಬೆಂಬಲಿಸುವುದಿಲ್ಲ
ದಕ್ಷಿಣ ಭಾರತದ ಏಳು ಜನರು ಕೇಂದ್ರದಲ್ಲಿ ಸಚಿವರಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಏನು ಮಾಡಿದರೂ ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಜನ ಬೆಂಬಲಿಸುವುದಿಲ್ಲ. ಏಕೆಂದರೆ ಬಿಜೆಪಿಯು ಆರ್ಎಸ್ಎಸ್ನ ರಾಜಕೀಯ ಮುಖವಾಡ. ಹಾಗಾಗಿ ಉತ್ತರ ಭಾರತದಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ. ಆರ್ಎಸ್ಎಸ್ನ ಮುಖ್ಯಸ್ಥರು ಅಹಂಕಾರಕ್ಕೆ ಜನ ಸರಿಯಾದ ಪಾಠ ಕಲಿಸಿದ್ದಾರೆ ಎಂದು ಹೇಳಿದ್ದಾರೆ ಎಂದರು.
ಅರುಂಧತಿ ರಾಯ್ ವಿರುದ್ಧ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿ, ಬಿಜೆಪಿಯದ್ದು ದ್ವೇಷದ ರಾಜಕಾರಣ. ಹೆದರಿಸುವುದು ಬೆದರಿಸುವುದು, ಇಡಿ, ಸಿಬಿಐ ಬಳಕೆ ಮಾಡುವುದನ್ನು ಮೊದಲಿನಿಂದಲೂ ಮಾಡಿಕೊಂಡು ಬರುತ್ತಿದ್ದಾರೆ. ಅದಕ್ಕಾಗಿ ಜನ ಈ ಬಾರಿ ಅವರಿಗೆ ಬಹುಮತ ಕೊಡಲಿಲ್ಲ ಎಂದರು.
ಇನ್ನೂ ಚುನಾವಣೆ ಯಾವಾಗ ನಡೆಸುತ್ತೀರಿ ಎಂಬ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ಸಿದ್ದರಾಮಯ್ಯ ಶೀಘ್ರದಲ್ಲೇ ಜಿಲ್ಲಾ ತಾಲೂಕು ಪಂಚಾಯ್ತಿ ಚುನಾವಣೆ ನಡೆಸುತ್ತೇವೆ ಎಂದು ತಿಳಿಸಿದರು.