ಮೈಸೂರು ದಸರಾ ಹಿನ್ನೆಲೆ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ದಸರಾ ಜನರ ಉತ್ಸವ. ಇದು ಸರ್ಕಾರದ ಉತ್ಸವ ಅಲ್ಲ. ಇದರ ಹೊಣೆ ಜಿಲ್ಲಾಡಳಿತದ್ದು, ದಸರಾ ನೆಪದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತ ಆಗಬಾರದು. ದಸರಾ ಜವಾಬ್ದಾರಿ ಇದ್ದವರನ್ನು ಹೊರತುಪಡಿಸಿ ಉಳಿದವರು ದಸರಾ ನೆಪದಲ್ಲಿ ಕಳ್ಳಾಟ ಆಡಬಾರದು ಎಂದು ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.
ನಂತರ ಮಾತನಾಡಿದ ಅವರು, ಎಲ್ಲಾ ನ್ಯಾಯಲಯಗಳಿಗಿಂತ ಜನತಾ ನ್ಯಾಯಾಲಯ ಮುಖ್ಯ, ಆತ್ಮಸಾಕ್ಷಿ ಮುಖ್ಯ ಎನ್ನುವ ಮಹಾತ್ಮಗಾಂಧಿಯವರ ಮಾತನ್ನು ಅಧಿಕಾರಿಗಳಿಗೆ ಸಿಎಂ ಸಿದ್ದರಾಮಜಯ್ಯ ನೆನಪಿಸಿದರು. ನೆಪ ಹೇಳುವುದು, ಸುಳ್ಳು ಹೇಳುವುದನ್ನು ಅಧಿಕಾರಿಗಳು ನಿಲ್ಲಿಸಬೇಕು. ಒಂದು ಸುಳ್ಳು ಹೇಳಿದರೆ ಅದನ್ನು ಸಮರ್ಥಿಸಲು ಮತ್ತೊಂದು, ಇನ್ನೊಂದು ಸುಳ್ಳುಗಳನ್ನು ಹೇಳುತ್ತಲೇ ಹೋಗಬೇಕಾಗುತ್ತದೆ. ಹೀಗಾಗಿ ಸುಳ್ಳು ಮತ್ತು ನೆಪ ಹೇಳುವ ಅಧಿಕಾರಿಗಳು ಸಿಕ್ಕಿ ಬೀಳುತ್ತಾರೆ. ಇದು ನಿಮ್ಮ ವೃತ್ತಿ ಜೀವನಕ್ಕೆ ಒಳ್ಳೆಯದಲ್ಲ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ಕಾನೂನು ಸುವ್ಯವಸ್ಥೆ ಸರಿ ಇಲ್ಲದಿದ್ದರೆ ರಾಜ್ಯದ ಅಭಿವೃದ್ಧಿ ಮತ್ತು ಆರ್ಥಿಕತೆಯ ಪ್ರಗತಿ ಸಾಧ್ಯ. ಪೊಲೀಸ್ ಇಲಾಖೆಯ ಬೇಜವಾಬ್ದಾರಿಯಿಂದ ಅಪರಾಧಗಳು ಆಗಬಾರದು. ರಾಜ್ಯದ ಬಂಡವಾಳ ಹೂಡಿಕೆಗೂ, ಕಾನೂನು-ಸುವ್ಯವಸ್ಥೆಗೂ ನೇರಾನೇರ ಸಂಬಂಧವಿದೆ-ಈ ಬಗ್ಗೆ ಕಟ್ಟೆಚ್ಚರ ವಹಿಸಿ ಎಂದು ಪೊಲೀಸ್ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚಿಸಿದರು.
ಆರೋಗ್ಯ-ಶಿಕ್ಷಣ-ಅನ್ನ-ನೀರು-ವಿದ್ಯುತ್-ರಸ್ತೆ ಸುರಕ್ಷತೆ ನನ್ನ ಪ್ರಥಮ ಆಧ್ಯತೆ. ಅಧಿಕಾರಿಗಳಿಗೆ ಯಾವುದೇ ಕಾರಣಕ್ಕೂ ಜಾತಿ ಸೋಂಕು ಇರಬಾರದು. ಸಂವಿಧಾನ ಮತ್ತು ಜಾತ್ಯತೀತವಾಗಿ ಸರ್ಕಾರದ ಕಾರ್ಯಕ್ರಮಗಳನ್ನು, ಜನರ ಸೇವೆಯನ್ನು ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದರು.