ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್ನಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಕ್ಯಾಂಪಸ್ ಸುತ್ತಮುತ್ತ ಭಯದ ವಾತಾವರಣ ನಿರ್ಮಾಣವಾಗಿದೆ. ಕಂಪನಿ ಆಡಳಿತ ಮಂಡಳಿ ಹಾಗೂ ಉದ್ಯೋಗಿಗಳು ಆತಂಕದಲ್ಲಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಕಂಪನಿಯು ಮಂಗಳವಾರ ಡಿಸೆಂಬರ್ 31 ರಂದು ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡುವಂತೆ ಸೂಚನೆ ನೀಡಿದೆ.
ಇನ್ನು ಮೈಸೂರು ಇನ್ಫೋಸೀಸ್ ಕ್ಯಾಂಪಸ್ ಸುತ್ತಮುತ್ತ ಚಿರತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಟಾಸ್ಕ್ ಫೋರ್ಸ್ ಕ್ಯಾಂಪಸ್ ಸುರಕ್ಷತೆಯನ್ನು ಪರಿಶೀಲಿಸಲಾಗುತ್ತಿದೆ. ಚಿರತೆಯ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಇನ್ಫೋಸಿಸ್ ಕಂಪನಿ ಮಾನವ ಸಂಪನ್ಮೂಲ ವಿಭಾಗದ ಸದಸ್ಯರು ಎಲ್ಲಾ ಉದ್ಯೋಗಿಗಳಿಗೆ ತಿಳಿಸಿದ್ದಾರೆ.
ಕಂಪನಿ ಹೆಳಿರುವ ಪ್ರಕಾರ ಇಂದು ನೀವೆಲ್ಲರು ಮನೆಯಿಂದ ಕೆಲಸ ಮಾಡಬೇಕು. ಯಾರು ಸಹ ಕ್ಯಾಂಪಸ್ಗೆ ಬಾರದಂತೆ ನೋಡಿಕೊಳ್ಳಲು ಟೀಂ ಲೀಡ್ಗೆ ಈ ಮಾಹಿತಿ ಕಳುಹಿಸಲಾಗಿದೆ. ಕ್ಯಾಂಪಸ್ನಲ್ಲಿ ಚಿರತೆ ಕಾಣಿಸಿಕೊಂಡಿದೆ. ಈ ಸಂಬಂಧ ಅರಣ್ಯ ಇಲಾಖೆ ಸಹಕಾರದಲ್ಲಿ ಚಿರತೆ ಪತ್ತೆಗೆ ಶೋಧ ನಡೆಯುತ್ತಿದ್ದು, ಕ್ಯಾಂಪಸ್ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ ಎಂದು ತಿಳಿಸಲಾಗಿದೆ.
ಮೈಸೂರಿನಲ್ಲಿರುವ ಇನ್ಫೋಸಿಸ್ ಕ್ಯಾಂಪಸ್ ಬರೋಬ್ಬರಿ 150 ಎಕರೆ ಪ್ರದೇಶದಲ್ಲಿದೆ. ಎಲ್ಲ ಕಡೆಗೂ ಇರುವ ಸಿಸಿಟಿವಿ ದೃಶ್ಯಾವಳಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಚಿರತೆ ಪತ್ತೆಗೆ ಹಾಗೂ ಸೆರೆ ಹಿಡಿಯಲು ವಿಶೇಷ ಕಾರ್ಯಪಡೆ ನಿಯೋಜಿಸಿದ್ದಾರೆ. ತ್ವರಿತವಾಗಿ ಸುರಕ್ಷತೆ ಒದಗಿಸುವ ಉದ್ದೇಶದಿಂದ ಅರಣ್ಯ ಇಲಾಖೆ ಅಲರ್ಟ್ ಆಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಉಪ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಐಬಿ ಪ್ರಭುಗೌಡ ಅವರು, ಮಂಗಳವಾರ ಬೆಳ್ಳಂಬೆಳಗ್ಗೆ 2 ಗಂಟೆ ಸುಮಾರಿಗೆ ಚಿರತೆ ಓಡಾಡಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಬಳಿಕ ಸುಮಾರು ಬೆಳಗ್ಗೆ 4 ಗಂಟೆಗೆ ಹೊತ್ತಿಗೆ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಚಿರತೆ ಪತ್ತೆಗೆ ಶೋಧ ನಡೆಸಿದ್ದಾರೆ ಎಂದು ಮಾಹಿತಿ ನೀಡಿದರು.
ಇನ್ಫೋಸಿಸ್ ಕ್ಯಾಂಪಸ್ ಮೀಸಲು ಅರಣ್ಯ ಪ್ರದೇಶಕ್ಕೆ ಹತ್ತಿರದಲ್ಲಿದೆ. ಈ ಅರಣ್ಯದ ಭಾಗವು ಹಿಂದಿನಿಂದಲೇ ಚಿರತೆ ವಾಸಸ್ಥಳವಾಗಿದೆ.ಹೀಗಾಗಿ ಆಗಾಗ ಕ್ಯಾಂಪಸ್ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಚಿರತೆಗಳು ಕಾಣುತ್ತಿವೆ. ಆಹಾರ ಅರಸಿ ಬಂದು ದಾರಿ ತಪ್ಪಿ ಕ್ಯಾಂಪಸ್ ಒಳಗೆ ಬಂದಿರುವ ಶಂಕೆ ಇದೆ. ಕೂಡಲೇ ಎಲ್ಲ ಸಿಸಿಟಿವಿ ಪರಿಶೀಲಿಸಿ ಸುರಕ್ಷತೆಯನ್ನು ಖಚಿತಪಡಿಸಲಾಗುವುದು ಎಂದು ಅರಣ್ಯಧಿಕಾರಿಗಳು ತಿಳಿಸಿದ್ದಾರೆ.