ಮೈಸೂರು: ನಗರದ ಹೊರವಲಯದಲ್ಲಿ ತಡರಾತ್ರಿ ನಡೆಯುತ್ತಿದ್ದ ರೇವ್ ಪಾರ್ಟಿಗೆ ಪೊಲೀಸರು ಎಂಟ್ರಿ ಕೊಟ್ಟು ಕಾರ್ಯಾಚರಣೆ ನಡೆಸಿದ್ದು, 50ಕ್ಕೂ ಹೆಚ್ಚು ಯುವಕರನ್ನು ವಶಕ್ಕೆ ಪಡೆದಿದ್ದಾರೆ.
ಸಾಂಸ್ಕೃತಿಕ ನಗರಿ ಮೈಸೂರಿನ ಹೊರವಲಯದಲ್ಲಿ ರೇವ್ ಪಾರ್ಟಿ ನಡೆಯುತ್ತಿರುವ ಬಗ್ಗೆ ತಿಳಿದು ಮೈಸೂರು ಜಿಲ್ಲಾ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ತಡರಾತ್ರಿ ಪಾರ್ಟಿ ಮಾಡುತಿದ್ದ ವೇಳೆ ಪೊಲೀಸರು ದಿಢೀರ್ ಎಂಟ್ರಿ ಕೊಟ್ಟಿದ್ದು, ಪಾರ್ಟಿಯಲ್ಲಿ 50ಕ್ಕೂ ಹೆಚ್ಚು ಯುವಕರನ್ನು ವಶಕ್ಕೆ ಪಡೆದಿದ್ದಾರೆ.
ಕಾರ್ಯಾಚರಣೆ ವೇಳೆ ತಪ್ಪಿಸಿಕೊಳ್ಳಲು ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪ ವ್ಯಕ್ತವಾಗಿದೆ. ಅಡಿಷನಲ್ ಎಸ್ಪಿ ನಾಗೇಶ್ ಹಾಗೂ ಡಿವೈಎಸ್ಪಿ ಕರೀಂ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಎಸ್ಪಿ ವಿಷ್ಣುವರ್ಧನ್ ಮಾತನಾಡಿ, ಪಾರ್ಟಿಯಲ್ಲಿ ಯಾವುದೇ ಮಾದಕ ವಸ್ತು, ಮಾದಕ ದ್ರವ್ಯ ಸಿಕ್ಕಿಲ್ಲ. ಆದರೆ ಸ್ಥಳದಲ್ಲಿ ಮದ್ಯ ಹಾಗೂ ಸಿಗರೇಟ್ ದೊರೆತಿದೆ. ಎಫ್ಎಸ್ಎಲ್ ತಂಡ (FSL) ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಜೊತೆಗೆ ಪಾರ್ಟಿಯಲ್ಲಿದ್ದ ಎಲ್ಲರ ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುವುದು ಹಾಗೂ ವರದಿ ಬಂದ ನಂತರ ಈ ಬಗ್ಗೆ ಸ್ಪಷ್ಟನೆ ಸಿಗಲಿದೆ ಎಂದು ಮಾಹಿತಿ ನೀಡಿದ್ದಾರೆ.
ಒಟ್ಟು 150ಕ್ಕೂ ಹೆಚ್ಚು ಯುವಕ-ಯುವತಿಯರು ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಜೊತೆಗೆ ಪಾರ್ಟಿಯಲ್ಲಿ ಇಸ್ರೇಲ್ನಿಂದ ರ್ಯಾಪರ್ ಗ್ರೇನ್ ರಿಪ್ಪರ್ ಬಂದಿದ್ದನು. ಆಯೋಜಕರಿಂದ ಪಾರ್ಟಿಗೆ ಬರಲು ತಲಾ 2000 ರೂ. ಹಣವನ್ನು ನಿಗದಿ ಮಾಡಿದ್ದರು. ಪೊಲೀಸರ ದಾಳಿ ವೇಳೆ ಅಲ್ಲಿದ್ದ ಯುವಕ-ಯುವತಿಯರು ಎದ್ನೋ ಬಿದ್ನೋ ಎಂದು ಓಡಿ ಹೋಗಿದ್ದಾರೆ.