ಬಿಜೆಪಿಯಿಂದ ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ಉಚ್ಚಾಟನೆ ಮಾಡಬೇಕು ಎಂದು ಮೈಸೂರು ಬಿಜೆಪಿ ನಾಯಕರಿಂದ ಸಿಂಹ ವಿರುದ್ಧ ವಿಜಯೇಂದ್ರಗೆ ದೂರು ನೀಡಲಾಗಿದೆ. ಬಿಜೆಪಿ ನಗರಾಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷರಿಗೆ ಪತ್ರ ಬರೆದು ಆಗ್ರಹಿಸಲಾಗಿದೆ. ಹಿಂದೂಪರ ಹೋರಾಟಗಾರ ಬಿಜೆಪಿ ಎಸ್.ಟಿ ಮೋರ್ಚಾ ಅಧ್ಯಕ್ಷ ಮೈ.ಕಾ ಪ್ರೇಮ್ ಕುಮಾರ್ ಅವರು 12 ಕಾರಣಗಳನ್ನು ನೀಡಿ ಸುದೀರ್ಘ ಪತ್ರ ಬರೆದು ಮಾಜಿ ಸಂಸದ ಪ್ರತಾಪ್ ಸಿಂಹ ಉಚ್ಚಾಟನೆಗೆ ಮನವಿ ಮಾಡಿದ್ದಾರೆ. ಆ ಪತ್ರದಲ್ಲಿನ 12 ಕಾರಣಗಳು ಇಂತಿವೆ.
1 : ಪ್ರತಾಪ್ ಸಿಂಹ ಅವರು ಪ್ರಜಾಪ್ರಭುತ್ವದ ದೇಗುಲವೆಂದೇ ಕರೆಯಲ್ಪಡುವ ದೇಶದ ಸಂಸತ್ ಭವನದ ಒಳಗೆ ಸ್ಮೋಕ್ ಬಾಂಬ್ ದಾಳಿ ನಡೆಸಿದ ಭಯೋತ್ಪಾದಕರಿಗೆ ಯಾವುದೇ ಪೂರ್ವಾಪರ ಪರಿಶೀಲಿಸದೆ ಒಳಗೆ ಪ್ರವೇಶಿಸಲು ಪಾಸ್ ನೀಡಿರುವುದು ದೇಶದ ಭದ್ರತಾ ವ್ಯವಸ್ಥೆಯನ್ನೇ ಅಣಕಿಸಿದ್ದಷ್ಟೇ ಅಲ್ಲದೆ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಹಾಗೂ ಸಮಸ್ತ ಕರ್ನಾಟಕದ ಜನತೆ ತಲೆ ಎತ್ತಿ ನಡೆಯಲು ಸಾಧ್ಯವಾಗದಷ್ಟು ಮುಜುಗರವನ್ನು ಸೃಷ್ಟಿಸಿತ್ತು. ಆ ಪ್ರಕರಣದ ತನಿಖೆ ಇಂದಿಗೂ ಕೂಡ ನಡೆಯುತ್ತಿದ್ದು ಪಾಸ್ ನೀಡಿಕೆಯ ಆರೋಪ ಹೊತ್ತಿರುವ ಪ್ರತಾಪ್ ಸಿಂಹ ಅವರ ತಲೆಯ ಮೇಲೆ ತೂಗುಗತ್ತಿ ಇಂದಿಗೂ ಬದಿಗೆ ಸರಿದಿರುವುದಿಲ್ಲ.
2 : ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ತಮ್ಮದಲ್ಲದ ವರುಣಾ ಕ್ಷೇತ್ರದಲ್ಲಿ ಮಾತ್ರ ಹೆಚ್ಚು ಪ್ರಚಾರ ನಡೆಸಿ, ಮೈಸೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಕ್ಷೇತ್ರಗಳಲ್ಲಿ ಉದ್ದೇಶಪೂರ್ವಕವಾಗಿಯೇ ಪ್ರಚಾರದಿಂದ ಹಿಂದೆ ಸರಿದಿದ್ದು, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಬಿಜೆಪಿಯ ಅಭ್ಯರ್ಥಿಗಳ ಸೋಲಿಗೆ ಕಾರಣರಾಗಿರುತ್ತಾರೆ.
3 : ವಿಧಾನಪರಿಷತ್ ಚುನಾವಣೆಯ ಸಂದರ್ಭದಲ್ಲಿ ಮತದಾನಕ್ಕೆ ಕ್ಷಣಗಣನೆ ಪ್ರಾರಂಭವಾದ ಸಂದರ್ಭದಲ್ಲಿ ನ್ಯಾಯವಾದಿಗಳ ವಿರುದ್ಧ ಹೇಳಿಕೆ ನೀಡುವ ಮುಖಾಂತರ ಸಾವಿರಾರು ಮತಗಳು ಭಾರತೀಯ ಜನತಾ ಪಕ್ಷದ ಅಧಿಕೃತ ಅಭ್ಯರ್ಥಿ ಮೈ.ವಿ.ರವಿ ಶಂಕರ್ ವಿರುದ್ಧ ಮತ ಬೀಳುವಂತೆ ಮಾಡುವ ಕೃತ್ಯವನ್ನು ಮಾಡಿರುತ್ತಾರೆ. ಅಂದಿನ ಅವರ ಆ ಹೇಳಿಕೆಯು ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ಧ ದುರುದ್ದೇಶಪೂರಿತವಾಗಿಯೇ ನೀಡಿರುವುದೆನ್ನುವುದು ಪ್ರತಿಯೊಬ್ಬರಿಗೂ ಖಾತ್ರಿಯಾಗಿದೆ.
4 : ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ಅಧಿಕೃತ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ವಿರುದ್ಧ ಹಲವಾರು ರೀತಿಯ ಅಪಪ್ರಚಾರಗಳನ್ನು ನಡೆಸಿರುತ್ತಾರೆ. ಯಾವ ಯಾವ ವಿಷಯಗಳನ್ನು ಉಲ್ಲೇಖಿಸಿ ಯದುವೀರ್ ಅವರ ವಿರುದ್ಧ ಆರೋಪಗಳನ್ನು ಮಾಡಬೇಕು ಎನ್ನುವ ಕುರಿತು ವಿರೋಧ ಪಕ್ಷಗಳ ನಾಯಕರಿಗೆ ಪ್ರತಾಪ್ ಸಿಂಹ ಅವರೇ ಪರೋಕ್ಷವಾಗಿ ಸೂಚನೆಗಳನ್ನು ರವಾನಿಸಿರುತ್ತಾರೆ.
5: ಪ್ರತಾಪ್ ಸಿಂಹ ಅವರು ತಮ್ಮ ಅಭಿಪ್ರಾಯಗಳನ್ನು ಪಕ್ಷದ ವೇದಿಕೆಯಲ್ಲಿ ಚರ್ಚಿಸದೆ ಪಕ್ಷದ ನಾಯಕರ ವಿರುದ್ಧ, ಪಕ್ಷದ ತೀರ್ಮಾನಗಳ ವಿರುದ್ಧ ಬಹಿರಂಗವಾಗಿ ಮತ್ತು ನಿರಂತರವಾಗಿ ಹೇಳಿಕೆಗಳನ್ನು ಕೊಡುತ್ತಾ, ಮಾಧ್ಯಮಗಳಿಗೆ ಸಂದರ್ಶನಗಳನ್ನು ಕೊಡುತ್ತಾ ಮುಜುಗರ ಸೃಷ್ಟಿಸುತ್ತಿದ್ದಾರೆ. ಪಕ್ಷದ ಅಧಿಕೃತ ಹೋರಾಟಗಳಿಗೆ ಪರ್ಯಾಯವಾಗಿ ತಮ್ಮದೇ ಆದ ಹೇಳಿಕೆಗಳನ್ನು ನೀಡುತ್ತಾ ಭಾರತೀಯ ಜನತಾ ಪಕ್ಷದಲ್ಲಿ ಒಡಕುಂಟಾಗಿದೆ ಎಂದು ಬಿಂಬಿಸುವ ಕೆಲಸ ಮಾಡುತ್ತಿದ್ದಾರೆ.ಮುಡಾ ಹಗರಣದ ವಿರುದ್ಧ ಜಿಲ್ಲಾ ಬಿಜೆಪಿ ನಡೆಸಿದ ಹೋರಾಟದ ಸ್ಥಳದಲ್ಲಿ ಅವರು ಮಾಧ್ಯಮಗಳ ಮುಂದೆ ಪ್ರತ್ಯೇಕ ಹೇಳಿಕೆಗಳನ್ನು ನೀಡುವ ಮುಖಾಂತರ ಕಾರ್ಯಕ್ರಮವನ್ನು ಹಾಳು ಮಾಡಿದ ಘಟನೆಯೂ ನಡೆದಿದೆ. ಮತ್ತು ಆ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರಗೊಂಡು ಪಕ್ಷಕ್ಕೆ ಮುಜುಗರ ಉಂಟಾದ ಘಟನೆಯೂ ನಡೆದಿದೆ.
6 : ವಿರೋಧ ಪಕ್ಷದ ಮುಖಂಡರು “ಪ್ರತಾಪ್ ಸಿಂಹ ಅವರ ಹಲವಾರು ವೀಡಿಯೋಗಳು ತಮ್ಮ ಬಳಿ ಇವೆ” ಎಂದು ಬಹಿರಂಗವಾಗಿ ಹೇಳಿಕೆ ಕೊಡುತ್ತಿದ್ದರೂ, ಪ್ರತಾಪ್ ಸಿಂಹ ಅವರು ಕಾನೂನು ಮುಖಾಂತರ ಅವರ ಹೇಳಿಕೆಗಳನ್ನು ಎದುರಿಸದೆ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದಾರೆ. ಇದು ಪಕ್ಷಕ್ಕೂ ಕೂಡ ಮುಜುಗರ ತರುವ ವಿಷಯವಾಗಿದೆ.
7 : ಇತ್ತೀಚೆಗಷ್ಟ್ಟೆ ‘ಪ್ರತಾಪ್ ಸಿಂಹ ಅವರಿಗೆ ಭಾರತೀಯ ಜನತಾ ಪಕ್ಷದಿಂದ ಲೋಕ ಸಭಾ ಚುನಾವಣೆಯಲ್ಲಿ ಏಕೆ ಟಿಕೆಟ್ ಸಿಕ್ಕಿಲ್ಲ’ ಎನ್ನುವ ವಿಷಯದ ಕುರಿತ ‘ಕತ್ತಲೆ ಜಗತ್ತು’ ಎನ್ನುವ ಪುಸ್ತಕವನ್ನು ಲೇಖಕರೊಬ್ಬರು ಬರೆದಿದ್ದು, ಪ್ರತಾಪ್ ಸಿಂಹ ಅವರು ಆ ಪುಸ್ತಕ ಬಿಡುಗಡೆ ಮಾಡದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುತ್ತಾರೆ. ಸ್ವತಃ ಲೇಖಕರಾಗಿದ್ದ ಅವರೇ ಇನ್ನೊಬ್ಬ ಲೇಖಕರ ಪುಸ್ತಕದ ವಿರುದ್ಧ ತಡೆಯಾಜ್ಞೆ ತಂದಿರುವ ಈ ನಡೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟ್ಟು ಸಂಶಯವನ್ನು ಹುಟ್ಟುಹಾಕಿದ್ದು, ಅದು ಅಭಿಪ್ರಾಯ ಸ್ವಾತಂತ್ರ್ಯದ ಪರ ಇರುವ ಭಾರತೀಯ ಜನತಾ ಪಕ್ಷದ ಸಿದ್ಧಾಂತದ ಉಲ್ಲಂಘನೆಯೂ ಆಗಿದೆ. ಇಷ್ಟೇ ಅಲ್ಲದೆ ಈ ವಿಚಾರವು ರಾಜ್ಯಮಟ್ಟದ ಮಾಧ್ಯಮಗಳಲ್ಲಿ ದಿನ ನಿತ್ಯವೂ ಸುದ್ದಿಯಾಗುತ್ತಲೇ ಇದ್ದು, ಪಕ್ಷಕ್ಕೆ ಮತ್ತು ಸ್ಥಳೀಯ ಮುಖಂಡರಿಗೆ ತೀವ್ರ ಮುಜುಗರವನ್ನು ಉಚಿಟುಮಾಡುತ್ತಿದೆ.
8 : ಈ ಹಿಂದೆ ಕೂಡ ಹಲವಾರು ಬಾರಿ ಪ್ರತಾಪ್ ಸಿಂಹ ಅವರ ಪಕ್ಷವಿರೋಧಿ ಚಟುವಟಿಕೆಗಳ ಕುರಿತು ಸ್ಥಳೀಯ ಮುಖಂಡರಿAದ ದೂರು ಸಲ್ಲಿಕೆಯಾಗಿದ್ದರೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ.
9 : ಮಾಜಿ ಸಂಸದ ಪ್ರತಾಪಸಿಂಹ ಹಾಲಿ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ರವರ ವಿರುದ್ಧದ ಹೆಜ್ಜೆಗಳನ್ನು ಹಾಕುತ್ತಿದ್ದಾರೆ ಹಾಲಿ ಸಂಸದರ ಕೆಲಸಗಳಿಗೆ ಅಡ್ಡಿಪಡಿಸುವಂತ ಕೆಲಸಗಳನ್ನು ಮಾಡುತ್ತಿದ್ದಾರೆ ಉದಾಹರಣೆಗೆ ಹುಣಸೂರು ಮತ್ತು ಕುಶಾಲನಗರ ಹೈವೇ ರಸ್ತೆಯ ವಿಷಯವಾಗಿ ಹಾಗೂ ರೈಲ್ವೆ ಮತ್ತು ಬೆಂಗಳೂರು ಮೈಸೂರು ಹೈವೇ ಹೆದ್ದಾರಿಗಳ ವಿಷಯವಾಗಿ ಮಾಜಿ ಸಂಸದ ಪ್ರತಾಪ ಸಿಂಹ ಅಧಿಕಾರಿಗಳಿಗೆ ಮತ್ತು ಕೇಂದ್ರ ಮಂತ್ರಿಗಳಿಗೆ ಮನವಿ ಮಾಡುವುದು, ಹಾಲಿ ಸಂಸದರನ್ನ ಮುಜುಗರಕೀಡು ಮಾಡುವುದು ಮಾಜಿ ಸಂಸದ ಪ್ರತಾಪ ಸಿಂಹನ ಉದ್ದೇಶವಾಗಿದೆ.
10 : ಮಾಜಿ ಸಂಸದ ಪ್ರತಾಪ ಸಿಂಹ ಸಿದ್ದರಾಮಯ್ಯ ಆರೋಗ್ಯ ಮಾರ್ಗ ರಸ್ತೆಗೆ ಹೆಸರಿಡಲು ಬೆಂಬಲ ಕೊಡುವುದು ಪಕ್ಷದ ನಿಲುವಿನ ವಿರುದ್ಧದ ನಡೆಗಳು ಈ ವಿಷಯದಿಂದ ಗೊತ್ತಾಗುತ್ತದೆ.
11 : ವಕ್ಫ್ ಬೋರ್ಡ್ ವಿಷಯವಾಗಿ ಪಕ್ಷದ ಬ್ಯಾನರ್ನಲ್ಲಿ ಹೋರಾಟ ಮಾಡದೆ ಪ್ರತ್ಯೇಕ ಹೋರಾಟದಲ್ಲಿ ಪಾಲ್ಗೊಂಡು ರಾಜ್ಯದ್ಯಕ್ಷರಾದ ವಿಜಯೇಂದ್ರ ರವರಿಗೆ ಮುಜುಗರಕೀಡು ಮಾಡುವುದು ಪ್ರತಾಪ ಸಿಂಹನ ಉದ್ದೇಶವಾಗಿದೆ.
12 : ಈ ಮಾಜಿ ಸಂಸದ ಪ್ರತಾಪ್ ಸಿಂಹ ಕೇಂದ್ರ ಮಂತ್ರಿಗಳನ್ನು ಅದರಲ್ಲೂ ರೈಲ್ವೆ ಮಂತ್ರಿ ಸೋಮಣ್ಣರವರನ್ನು ಪದೆ ಪದೇ ಭೇಟಿ ಮಾಡುವುದು ತಮಗೆ ಸಂಬಂಧ ಪಡೆದ ಮೈಸೂರು ಮತ್ತು ಕೊಡಗು ಕ್ಷೇತ್ರ ವಿಷಯಗಳಲ್ಲಿ ಮೂಗು ತೂರಿಸಿ ಅರ್ಜಿಗಳನ್ನು ಕೊಡುವುದು ಟಿಪ್ಪಣಿ ಕಾಪಿಗಳನ್ನು ತನ್ನ ಸಾಮಾಜಿಕ ತಾಣಗಳಲ್ಲಿ ಸೇರಿದಂತೆ ಪತ್ರಿಕೆಗಳಲ್ಲಿ ಹೇಳಿಕೆಗಳನ್ನು ಕೊಡುವುದು ನಾನು ಮಾಜಿ ಸಂಸದನಾದರೂ ಕೂಡ ಪ್ರಭಾವಿ ಇದ್ದೇನೆ ಈಗಲೂ ಕೂಡ ಈ ಕ್ಷೇತ್ರಕ್ಕೆ ಅನುದಾನ ಅಥವಾ ಅಭಿವೃದ್ಧಿ ಕೆಲಸಗಳನ್ನು ಮಾಡಿಸುವ ತಾಕತ್ತು ನನಗೆ ಇದೆ ಎಂದು ತೋರಿಸಿಕೊಳ್ಳುವ ಪ್ರಯತ್ನದಲ್ಲಿ ನಮ್ಮದೇ ಪಕ್ಷದ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರನ್ನು ಅವಮಾನಿಸುವುದರ ಜೊತೆಗೆ ಅವರ ಕೆಲಸಗಳಿಗೆ ಅಡ್ಡಿಪಡಿಸುವುದರ ಜೊತೆಗೆ ವಿರೋಧ ಪಕ್ಷಗಳಿಗೆ ನಮ್ಮ ಪಕ್ಷವನ್ನು ಟೀಕಿಸಲು ಅನುವು ಮಾಡಿಕೊಡುತ್ತಿದ್ದಾರೆ.