ಮೈಸೂರು ಅಭಿವೃದ್ಧಿ ಪ್ರಾಧಿಕಾರ ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಿನಾಮೆ ಆಗ್ರಹಿಸಿ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಜಂಟಿಯಾಗಿ ಮೈಸೂರು ಚಲೋ ಪಾದಯಾತ್ರೆ ಆರಂಭಿಸಿದ್ದಾರೆ. ಶನಿವಾರ ಬೆಂಗಳೂರಿನ ಕೆಂಗೇರಿಯಿಂದ ಪಾದಯಾತ್ರೆ ಆರಂಭಿಸಿದ ನಾಯಕರು ಬಿಡದಿಯಲ್ಲಿ ರಾತ್ರಿ ವಿಶ್ರಾಂತಿ ಪಡೆದರು. ಇಂದು ಬಿಡದಿಯಿಂದ 2ನೇ ದಿನದ ಮೈಸೂರು ಪಾದಯಾತ್ರೆ ಆರಂಭವಾಗಿದೆ.
ಪಾದಯಾತ್ರೆ ಇಂದು ಸುಮಾರು 20 ಕಿ.ಮೀ. ದೂರ ಸಾಗಲಿದೆ. ನಾಯಕರು ಮಾಯಗಾನಹಳ್ಳಿಯಲ್ಲಿ ಕಾಫಿ ಬ್ರೇಕ್ ತೆಗೆದುಕೊಳ್ಳಲಿದ್ದಾರೆ. ರಾಮನಗರದ ಪದ್ಮಾವತಿ ದೇವಸ್ಥಾನದಲ್ಲಿ ಮಧ್ಯಾಹ್ನದ ಭೋಜನ ಸ್ವೀಕರಿಸುವರು. ರಾತ್ರಿ ಕೆಂಗಲ್ ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಇಂದಿನ ಪಾದಯಾತ್ರೆಯಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಭಾಗಿಯಾಗಲಿದ್ದಾರೆ. ಬಿಜೆಪಿ ಎಸ್ಸಿ ಮೋರ್ಚಾಗೆ ಎರಡನೇ ದಿನದ ಪಾದಯಾತ್ರೆ ಜವಾಬ್ದಾರಿ ನೀಡಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಮಟೆ ಬಾರಿಸುವುದರ ಮೂಲಕ ಎರಡನೇ ದಿನದ ಪಾದಯಾತ್ರೆಗೆ ಚಾಲನೆ ನೀಡಿದ್ದಾರೆ.