ರಾಜ್ಯದಲ್ಲಿ ಮತ್ತೆ ಎನ್ಡಿಎ ಸರ್ಕಾರವನ್ನು ತರಲು ಬಿಜೆಪಿ, ಜೆಡಿಎಸ್ನ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಒಟ್ಟಾಗಿ ಕೆಲಸ ಮಾಡುವುದಾಗಿ ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಭಾನುವಾರ ಹೇಳಿದ್ದಾರೆ. ಜೆಡಿಎಸ್ ಪಕ್ಷ ಮತ್ತೊಮ್ಮೆ ಕಾಂಗ್ರೆಸ್ ಜೊತೆ ಕೈ ಜೋಡಿಸುವ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಪಪಡಿಸಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ರಾಷ್ಟ್ರೀಯ ಪಕ್ಷಗಳೊಂದಿಗೆ ಎರಡು ಬಾರಿ ಜೆಡಿಎಸ್ ರಾಜ್ಯದಲ್ಲಿ ಅಧಿಕಾರ ನಡೆಸಿದೆ. 2006ರಲ್ಲಿ ಬಿಜೆಪಿಯೊಂದಿಗೆ 20 ತಿಂಗಳು ಹಾಗೂ ಮೇ 2018ರ ವಿಧಾನಸಭಾ ಚುನಾವಣೆ ನಂತರ ಕಾಂಗ್ರೆಸ್ ಜೊತೆಗೆ 14 ತಿಂಗಳ ಕಾಲ ಮೈತ್ರಿಯೊಂದಿಗೆ ಜೆಡಿಎಸ್ ಅಧಿಕಾರ ನಡೆಸಿತ್ತು. ಎರಡೂ ಅವಧಿಯಲ್ಲೂ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು. 2024ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಎನ್ಡಿಎ ಭಾಗವಾಯಿತು.
ಮುಡಾ ಹಗರಣ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಆಯೋಜಿಸಿರುವ ʻಮೈಸೂರು ಚಲೋʼ ಪಾದಯಾತ್ರೆಯ ಎರಡನೇ ದಿನವಾದ ಇಂದು ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ, ಮುಂದಿನ ದಿನಗಳಲ್ಲಿ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಮರಳಿ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ಯಾರು ಮುಖ್ಯಮಂತ್ರಿಯಾಗಬೇಕು ಎಂಬುದು ನನಗೆ ಮುಖ್ಯವಲ್ಲ. ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು. ಎರಡು ಬಾರಿ ರಾಜ್ಯದ ಮುಖ್ಯಮಂತ್ರಿ ಆಗಿದ್ದೇನೆ. ನನಗೆ ರಾಜ್ಯ ಮತ್ತು ಜನರ ಕಲ್ಯಾಣ ಮತ್ತು ಅಭಿವೃದ್ಧಿ ಮುಖ್ಯ ಎಂದರು.
ರಾಜ್ಯದಲ್ಲಿ ಜನಪರ ಸರ್ಕಾರ ತರುವುದು ನಮ್ಮ ಹೋರಾಟವಾಗಿದೆ. ಪ್ರತಿ ಕುಟುಂಬದ ಹಿತವನ್ನು ಬಯಸುವ ಸರ್ಕಾರವನ್ನು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ತರಲು ಬಯಸುತ್ತೇವೆ. ಅದಕ್ಕಾಗಿ ಉಭಯ ಪಕ್ಷಗಳ ಎಲ್ಲಾ ನಾಯಕರು ಮತ್ತು ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಅವರು ಹೇಳಿದರು. ಈ ಹಿಂದೆ 14 ತಿಂಗಳ ಕಾಲ ಕಾಂಗ್ರೆಸ್ ಪಕ್ಷದೊಂದಿಗೆ ಸರ್ಕಾರ ನಡೆಸಿದ ಅನುಭವದ ಬಗ್ಗೆ ಮಾತನಾಡಿದ ಮಾಜಿ ಸಿಎಂ, 2018ರಲ್ಲಿ ನನ್ನನ್ನು ಮುಖ್ಯಮಂತ್ರಿ ಮಾಡುವಂತೆ ಅರ್ಜಿಯೊಂದಿಗೆ ಕಾಂಗ್ರೆಸ್ ನಾಯಕರ ಬಳಿ ಹೋಗಿರಲಿಲ್ಲ. ಅವರೇ ನನ್ನನ್ನು ಮುಖ್ಯಮಂತ್ರಿ ಮಾಡಿದರು. ಆದರೆ ಆಗ ಹಣ ಲೂಟಿ ಮಾಡಲು ಅವಕಾಶವನ್ನು ಬಳಸಲಿಲ್ಲ, 25,000 ಕೋಟಿ ರೈತರ ಸಾಲವನ್ನು ಮನ್ನಾ ಮಾಡುವ ಮೂಲಕ ರೈತರನ್ನು ಉಳಿಸಲು ಪ್ರಯತ್ನಿಸಿದೆ ಎಂದು ಅವರು ಹೇಳಿದರು.