ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವ ಅದ್ದೂರಿಯಾಗಿ ನಡೆಯುತ್ತಿದೆ. ನಗರ ವಿದ್ಯುತ್ ದೀಪಾಲಂಕಾರದಿಂದ ಶೃಂಗಾರಗೊಂಡಿದೆ. ಚಾಮುಂಡಿ ಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆಗಳು ನೆರವೇರುತ್ತಿವೆ. ಮೈಸೂರು ದಸರಾ ವೀಕ್ಷಿಸಲು ಅಸಂಖ್ಯ ಜನರು ಆಗಮಿಸುತ್ತಿದ್ದಾರೆ. ದಸರಾ ಉತ್ಸವ ಆರಂಭವಾಗಿ ಎರಡು ದಿನಗಳು ಕಳೆದು, ಮೂರನೇ ದಿನಕ್ಕೆ ಕಾಲಿಟ್ಟಿದೆ. ದಸರಾ ಉತ್ಸವ ನಿಮಿತ್ತ ಇಂದು ಮೈಸೂರಿನಲ್ಲಿ ಯಾವೆಲ್ಲ ಕಾರ್ಯಕ್ರಮಗಳು ನಡೆಯಲಿವೆ ಎಂಬ ಸಂಪೂರ್ಣ ವಿವರ ಇಲ್ಲಿದೆ ನೋಡಿ.
ದಸರಾ ಉತ್ಸವದ ಕಾರ್ಯಕ್ರಮಗಳು:
- ಬೆಳಗ್ಗೆ 7 ಗಂಟೆಗೆ ಪಾರಂಪರಿಕ ಉಡುಗೆಯಲ್ಲಿ ದಂಪತಿಗಳು ಪಾರಂಪರಿಕ ಟಾಂಗಾ ಸವಾರಿ ಮಾಡಲಿದ್ದಾರೆ. ರಂಗಚಾರ್ಲು ಪುರಭವನದ ಆವರಣದಲ್ಲಿ (ಟೌನ್ ಹಾಲ್) ಕಾರ್ಯಕ್ರಮ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್. ಸಿ ಮಹದೇವಪ್ಪ ಚಾಲನೆ ನೀಡುವರು.
- ಬೆಳಗ್ಗೆ 9 ಗಂಟೆಗೆ ರಾಜ್ಯಮಟ್ಟದ ದಸರಾ ಯೋಗಾಸನ ಸ್ಪರ್ಧೆ ಆರಂಭವಾಗಲಿದೆ. ಯೋಗಾಸನ ಸ್ಪರ್ಧೆ ಉದ್ಘಾಟನಾ ಕಾರ್ಯಕ್ರಮವು ಮೈಸೂರು ದಸರಾ ವಸ್ತು ಪ್ರದರ್ಶನದಲ್ಲಿನ ಪಿ. ಕಾಳಿಂಗರಾವ್ ಸಭಾಂಗಣದಲ್ಲಿ ನಡೆಯಲಿದೆ. ಶಾಸಕ ಟಿ.ಎಸ್ ಶ್ರೀವತ್ಸ ಅವರು ಉದ್ಘಾಟಿಸಲಿದ್ದಾರೆ.
- ಬೆಳಗ್ಗೆ 9.30ಕ್ಕೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ರೈತ ದಸರಾ ಮೆರವಣಿಗೆ ನಡೆಯಲಿದೆ. ಕೃಷಿ ಸಚಿವ ಚೆಲುವರಾಯಸ್ವಾಮಿ ಅವರು ಉದ್ಘಾಟಿಸಲಿದ್ದಾರೆ.
- ಬೆಳಗ್ಗೆ 10.30ಕ್ಕೆ ಜಗನ್ಮೋಹನ ಅರಮನೆಯಲ್ಲಿ ದಸರಾ ಕವಿಗೋಷ್ಠಿ ಪಂಚ ಕಾವ್ಯೋತ್ಸವ ನಡೆಯಲಿದೆ. ಕಾರ್ಯಕ್ರಮವನ್ನು ಕವಿ, ಸಿನಿಮಾ ನಿರ್ದೇಶಕ ಡಾ. ನಾಗತಿಹಳ್ಳಿ ಚಂದ್ರಶೇಖರ್ ಅವರು ಉದ್ಘಾಟಿಸಲಿದ್ದಾರೆ.
- ಬೆಳಗ್ಗೆ 11ಗಂಟೆಗೆ ಜೆ.ಕೆ.ಗ್ರೌಂಡ್ನಲ್ಲಿ ಕೃಷಿ ವಸ್ತು ಪ್ರದರ್ಶನ ನಡೆಯಲಿದೆ. ಸಚಿವ ಕೆ. ವೆಂಕಟೇಶ್ ಅವರು ಉದ್ಘಾಟಿಸಲಿದ್ದಾರೆ.
- ಬೆಳಗ್ಗೆ 11.10ಕ್ಕೆ ಜೆ.ಕೆ. ಗ್ರೌಂಡ್ನಲ್ಲಿ ಮತ್ಸ್ಯ ಮೇಳ ನಡೆಯಲಿದೆ. ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಮಂಕಾಳ ಎಸ್ ವೈದ್ಯ ಅವರು ಉದ್ಘಾಟಿಸಲಿದ್ದಾರೆ.
- ಬೆಳಗ್ಗೆ 11.15ಕ್ಕೆ ವೈದ್ಯಕೀಯ ಮಹಾವಿದ್ಯಾಲಯದ ಅಲ್ಯೂಮಿನಿ ಅಸೋಸಿಯೇಷನ್ ಸಭಾಭವನದಲ್ಲಿ ರೈತ ದಸರಾ ವೇದಿಕೆ ಕಾರ್ಯಕ್ರಮ ಜರುಗಲಿದೆ. ರೈತರು, ರೈತ ಮಹಿಳೆಯರು, ವಿಜ್ಞಾನಿಗಳು, ಯುವ ರೈತರು ಮತ್ತು ಪ್ರಗತಿಪರ ರೈತರಿಗೆ ಸನ್ಮಾನ ಮಾಡಲಾಗುತ್ತದೆ. ಕಾರ್ಯಕ್ರಮವನ್ನು ಸಚಿವ ಡಾ. ಹೆಚ್. ಸಿ ಮಹದೇವಪ್ಪ ಅವರು ಉದ್ಘಾಟಿಸಲಿದ್ದಾರೆ.