ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿಯಲ್ಲಿ ಭಾಗವಹಿಸುವ ಅಭಿಮನ್ಯು ನೇತೃತ್ವದ ಗಜಪಡೆ, ಮಾವುತರು, ಕಾವಾಡಿಗಳ ಜತೆಗೆ ಅರಣ್ಯಾಧಿಕಾರಿಗಳಿಗೆ 1.87 ಕೋಟಿ ರುಪಾಯಿ ಮೊತ್ತದ ವಿಮೆ ಸೌಲಭ್ಯ ಒದಗಿಸಲಾಗಿದೆ. ಆಸ್ತಿಪಾಸ್ತಿ ಹಾಗೂ ಸಾರ್ವಜನಿಕರಿಗೂ ಪ್ರತ್ಯೇಕವಾಗಿ 50 ಲಕ್ಷ ರುಪಾಯಿ ವಿಮೆ ಸೌಲಭ್ಯವಿದೆ.
ಗಜಪಡೆಯ ತಾಲೀಮು ಅಥವಾ ಸಾರ್ವಜನಿಕರ ಮುನ್ನೆಚ್ಚರಿಕೆ ಕ್ರಮವಾಗಿ ಮೆರವಣಿಗೆಯ ಸಂದರ್ಭ ಅನಾಹುತದಿಂದ ಗಾಯಗೊಂಡರೆ, ಇಲ್ಲವೇ ಸಾರ್ವಜನಿಕರಿಗೆ ಹಾನಿಯಾದರೆ ಜಿಲ್ಲಾಡಳಿತ ವಿಮೆ ಮಾಡಿಸುತ್ತಿದೆ. ಗಜಪಡೆ ಮೈಸೂರಿಗೆ ಆಗಸ್ಟ್ 21ರಂದು ಆಗಮಿಸಲಿದ್ದು, ದಸರಾ ಮುಗಿದು ವಾಪಸ್ ಹೋಗುವವರೆಗೂ ಇದು ಚಾಲ್ತಿಯಲ್ಲಿರುತ್ತದೆ. ಒಟ್ಟಾರೆ 2,37,50,000 ರುಪಾಯಿಗಳಿಗೆ ವಿಮೆ ಮಾಡಿಸಿದ್ದು, ಅರಣ್ಯ ಇಲಾಖೆ ಪ್ರೀಮಿಯಂ ಪಾವತಿಸಿದೆ.