ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2024ರಲ್ಲಿ ಜಂಬೂಸವಾರಿ ಮತ್ತು ಟಾರ್ಚ್ ಲೈಟ್ ಶೋಗಳ ಟಿಕೆಟ್ಗೆ ಬೇಡಿಕೆ ಹೆಚ್ಚಿದೆ. ಹೀಗಾಗಿ ನೇರವಾಗಿ ಟಿಕೆಟ್ ಖರೀದಿ ಮಾಡಲು ಜಿಲ್ಲಾಡಳಿತ ಅವಕಾಶ ನೀಡಿದೆ. ಆನ್ಲೈನ್ನಲ್ಲಿ ಜಂಬೂಸವಾರಿ ಟಾರ್ಚ್ ಲೈಟ್ ಟಿಕೆಟ್ಗೆ ಬೇಡಿಕೆ ಹೆಚ್ಚಿರುವ ಹಿನ್ನೆಲೆ ಮೈಸೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲೂ ಟಿಕೆಟ್ ಖರೀದಿಗೆ ಅವಕಾಶ ನೀಡಲಾಗಿದೆ. ಡಿಸಿ ಕಚೇರಿಯ ಸ್ಪಂದನ ಕೇಂದ್ರದಲ್ಲಿ ಟಿಕೆಟ್ ಖರೀದಿ ಮಾಡಬಹುದು. ಈ ಬಗ್ಗೆ ದಸರಾ ವಿಶೇಷಾಧಿಕಾರಿ ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಮಾಹಿತಿ ನೀಡಿದ್ದಾರೆ.
ಇನ್ನು ಒಂದು ದಸರಾ ಗೋಲ್ಡ್ ಕಾರ್ಡ್ ನಲ್ಲಿ ಜಂಬೂಸವಾರಿ ಮೆರವಣಿಗೆ, ಪಂಜಿನ ಕವಾಯತು, ಚಾಮುಂಡಿಬೆಟ್ಟ, ಅರಮನೆ, ಚಾಮರಾಜೇಂದ್ರ ಮೃಗಾಲಯ ವೀಕ್ಷಣೆಗೆ ಅವಕಾಶ ನೀಡಲಾಗಿದೆ. ಅರಮನೆ ಆವರಣದಲ್ಲಿ ಜಂಬೂಸವಾರಿ ಮೆರವಣಿಗೆ ವೀಕ್ಷಣೆಗೆ ಟಿಕೆಟ್ ದರ 3500 ರೂಪಾಯಿ ನಿಗದಿಪಡಿಸಲಾಗಿದೆ. ಇನ್ನು ಪಂಜಿನ ಕವಾಯತು ವೀಕ್ಷಣೆಗೆ ಟಿಕೆಟ್ ದರ 1000 ರೂಪಾಯಿ ನಿಗದಿಪಡಿಸಲಾಗಿದೆ.
ಯುವ ದಸರಾಗೂ ಟಿಕೆಟ್
ಈ ಬಾರಿಯ ದಸರಾಗೆ ಮುಖ್ಯಮಂತ್ರಿ ಸಿದ್ದರಾಮಯ್ಯ 40 ಕೋಟಿ ರೂ. ಅನುದಾನ ನೀಡಲಾಗುವುದೆಂದು ಘೋಷಣೆ ಮಾಡಿದ್ದಾರೆ. ಆದರೂ ಕೆಲ ಕಾರ್ಯಕ್ರಮಗಳಿಗೆ ಟಿಕೆಟ್ ದರ ತುಸು ಹೆಚ್ಚಿದೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಯುವ ದಸರಾಗೆ ಇದೇ ಮೊದಲ ಬಾರಿಗೆ ಟಿಕೆಟ್ ವ್ಯವಸ್ಥೆ ಮಾಡಲಾಗಿದೆ. ವೇದಿಕೆ ಮುಂಭಾಗದ ಗ್ಯಾಲರಿ 1ರಲ್ಲಿ ಕುಳಿತು ಯುವ ದಸರಾ ನೋಡಲು 8 ಸಾವಿರ ರೂ. ದರ ನಿಗದಿಪಡಿಸಲಾಗಿದೆ. ಅದೇ ರೀತಿ ಗ್ಯಾಲರಿ 2ರಲ್ಲಿ ಕುಳಿತು ವೀಕ್ಷಿಸಲು 5 ಸಾವಿರ ರೂ. ಜೊತೆಗೆ 2500, 1500 ರೂ. ಪ್ರತ್ಯೇಕ ದರವನ್ನೂ ನಿಗದಿಪಡಿಸಲಾಗಿದೆ.
ಈ ಬಾರಿ ನಗರದ ಪ್ರಮುಖ ರಸ್ತೆಗಳನ್ನು ಒಳಗೊಂಡಂತೆ 130 ಕಿ.ಮೀ. ಉದ್ದದಲ್ಲಿ ದೀಪಾಲಂಕಾರ ಇದೆ. 100 ವೃತ್ತಗಳನ್ನು ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿದೆ. ಡಬಲ್ ಡೆಕ್ಕರ್ ಬಸ್ನಲ್ಲಿಅಕ್ಟೋಬರ್ 3ರಿಂದ 21ರವರೆಗೆ ದೀಪಾಲಂಕಾರದ ಸೊಬಗನ್ನು ಸಾರ್ವಜನಿಕರು ಕಣ್ತುಂಬಿಕೊಳ್ಳಬಹುದಾಗಿದೆ.