ಯೋಗಾಸನ ಮಾಡುವುದರಿಂದ ನಮ್ಮ ಚಿತ್ತ ಶರೀರದ ಕಡೆ ಹೋಗುತ್ತದೆ. ಶರೀರದ ಕಡೆ ಚಿತ್ತ ಇಡುವುದರಿಂದ ಚಿತ್ತ ದುರ್ಬಲಗೊಳ್ಳುತ್ತದೆ. ಇದಕ್ಕೆ ಧ್ಯಾನದ ಮಾರ್ಗ ಅನುಸರಿಸಿದರೆ ಚಿತ್ತವೂ ಹೆಚ್ಚು ಶಕ್ತಿಯುತವಾಗುತ್ತದೆ ಎಂದು ಪರಮಪೂಜ್ಯ ಶ್ರೀ ಶಿವಕೃಪಾನಂದಾ ಸ್ವಾಮೀಜಿ ಅವರು ಹೇಳಿದರು.
ಇಂದು ಬೆಂಗಳೂರಿನ ರಾಮಯ್ಯ ಮೆಡಿಕಲ್ ಕಾಲೇಜಿನಲ್ಲಿ ವೈದ್ಯರಿಗೆ ಹಾಗೂ ವಿದ್ಯಾರ್ಥಿಗಳಿಗೆ ನಡೆಸಿಕೊಟ್ಟ ಹಿಮಾಲಯದ ಧ್ಯಾನ ಶಿಬಿರದಲ್ಲಿ ಈ ಸಂದೇಶ ನೀಡಿದರು. ವೈದ್ಯರುಗಳು ನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ರೋಗಿಗಳ ಮೇಲೆ ಚಿತ್ತ ಇಡುವರು. ಇದರಿಂದ ಅವರ ಚಿತ್ತ ಎಷ್ಟು ದುರ್ಬಲಗೊಳ್ಳುತ್ತದೆ ಗೊತ್ತೆ.? ಇದಕ್ಕಾಗಿಯೇ ವಿಶೇಷವಾಗಿ ವೈದ್ಯರು, ಪೊಲೀಸರು, ಸೈನಿಕರು ಧ್ಯಾನ ಮಾಡಲೇಬೇಕು. ಧ್ಯಾನ ಎಂಬುದು ಚಿತ್ತದ ಸ್ನಾನ ಇದ್ದಹಾಗೆ.
ವೈದ್ಯಕೀಯದಲ್ಲಿ ನಮ್ಮ ಚಿತ್ತದಲ್ಲಿ ಬರುವ ಆಲೋಚನೆಗಳ ಬಗ್ಗೆ ಅಧ್ಯಯನ ಇಲ್ಲ ಎಂದು ಪೂಜ್ಯ ಗುರುಜೀಯವರು ತಿಳಿಸಿದರು.ಧ್ಯಾನ ಮಾಡುವುದರಿಂದ ನಿಮ್ಮ ಪ್ರಭಾವಳಿ ಶುದ್ಧವಾಗುತ್ತದೆ. ಹೀಗಿದ್ದಾಗ ನೀವು ಉತ್ತಮರಾಗುತ್ತೀರಿ, ಅಷ್ಟೇ ಅಲ್ಲ ನಿಮ್ಮ ಸುತ್ತಮುತ್ತ ಕೆಟ್ಟ ಜನಗಳು ಬರಲಾರರು, ಧ್ಯಾನ ಮಾಡುವುದರಿಂದ ಆತ್ಮ ಭಾವವೂ ವೃದ್ದಿಯಾಗಿ, ಶರೀರ ಭಾವ ಕಡಿಮೆಯಾಗುವುದು. ಇದರಿಂದಲೇ ಅನೇಕ ಲಾಭವನ್ನೂ ನೀವುಗಳಿಸಿಕೊಳ್ಳುವಿರಿ ಎಂದು ಗುರುಗಳು ಹೇಳಿದರು.
ಧ್ಯಾನದ ವೇಳೆ ನಿಮಗೆ ಶರೀರ ಅನೇಕ ರೀತಿಯಲ್ಲಿ ಪ್ರತಿರೋಧ ಒಡ್ಡಿದರೂ, ಅದನ್ನು ಲೆಕ್ಕಿಸಬಾರದು, ನಿತ್ಯವೂ ಧ್ಯಾನದ ಅಭ್ಯಾಸ ಮುಂದುವರಿಸಿದಲ್ಲಿ ಯಶಸ್ಸು ಕಾಣುವಿರಿ ಎಂದು ಗುರುಗಳು ವೈದ್ಯರು ಹಾಗೂ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಬೇರೆ ಬೇರೆ ದೇಶಗಳಲ್ಲಿ ಹಾಗೂ ಸಂಸತ್ನಲ್ಲಿಯೂ ನಡೆಸಿಕೊಟ್ಟ ಶಿಬಿರದ ಬಗ್ಗೆ ಗುರೂಜಿಯವರು ತಿಳಿಸಿಕೊಟ್ಟರು.
ಈ ಮಹತ್ ಶಿಬಿರದಲ್ಲಿ ಪರಮಪೂಜ್ಯ ಗುರುಮಾ ಅವರು ಉಪಸ್ಥಿತರಿದ್ದು, ಹಲವು ಸಂದೇಶಗಳನ್ನ ನೀಡಿದರು. ರಾಮಯ್ಯ ಯೂನಿರ್ವಸಿಟಿಯ ವೈಸ್ ಚಾನ್ಸ್ಲರ್ ಕುಲದೀಪ್ರೈನಾ ಹಾಗೂ ರಾಮಯ್ಯ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲೆ ಶಾಲಿನಿ ನೂಯಿ ಹಾಗೂ ಪಿಆರ್ಓ ಚಂದ್ರು ಅವರುಗಳು ಉಪಸ್ಥಿತರಿದ್ದರು. ಪೂಜ್ಯ ಗುರುಮಾ ಹಾಗೂ ಗುರೂಜಿಯವರಿಗೆ ಈ ವೇಳೆ ತುಂಬು ಗೌರವ ಸಲ್ಲಿಸಲಾಯಿತು. ಕಾರ್ಯಕ್ರಮ ಮುಗಿದ ಬಳಿಕ ಗುರುಮಾ ಹಾಗೂ ಗುರೂಜಿ ಅವರುಗಳು ಎಲೆಕ್ಟ್ರಿಕ್ ವಾಹನದಲ್ಲಿ ರಾಮಯ್ಯ ಕಾಲೇಜಿನ ಸೊಬಗನ್ನ ವೀಕ್ಷಿಸಿದರು.