ನಾಗರ ಪಂಚಮಿ ಹಿಂದೂಗಳಿಗೆ ಬಹಳ ಪವಿತ್ರ ಹಬ್ಬ. ನಾಗರಪಂಚಮಿ ಹಬ್ಬ ಭಾರತದಲ್ಲಿ ಆಚರಿಸಲಾಗುವ ಕೆಲವು ಪ್ರಾದೇಶಿಕ ಹಬ್ಬಗಳಲ್ಲಿ ಒಂದು. ಕರ್ನಾಟಕದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಹೆಚ್ಚಾಗಿ ಈ ಹಬ್ಬದ ಆಚರಣೆ ಕಂಡುಬರುತ್ತದೆ. ಈ ದಿನ ಸಾಮಾನ್ಯವಾಗಿ ನಾಗರ ಕಲ್ಲಿಗೆ ಅಭಿಷೇಕ ಮಾಡಲಾಗುತ್ತದೆ. ಹಾಗೂ ಜನರು ದೇವಸ್ಥಾನದ ಹತ್ತಿರದಲ್ಲಿರುವ ನಾಗನ ಹುತ್ತಗಳು, ಬನಗಳಿಗೆ ಭೇಟಿ ನೀಡಿ ಹಾಲು ಇಟ್ಟು ಪೂಜೆ ಮಾಡಿ ಆಚರಿಸುತ್ತಾರೆ. ಈ ಪದ್ಧತಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಬಳಿಕ ಅಭಿಷೇಕ ಮಾಡಿದಂತಹ ಹಾಲು, ಎಳನೀರನ್ನು ದೇವರ ತೀರ್ಥವೆಂದು ಸೇವನೆ ಮಾಡಲಾಗುತ್ತದೆ.
ನಾಗರ ಪಂಚಮಿ ಶ್ರಾವಣ ಮಾಸದಲ್ಲಿ ಬರುವ ಮೊದಲ ಹಬ್ಬ. ನಾಗರ ಪಂಚಮಿಯ ನಂತರ ಸಾಲು ಸಾಲು ಹಬ್ಬಗಳು ಬರತೊಡಗುತ್ತದೆ. ವರ ಮಹಾಲಕ್ಷ್ಮಿ ಹಬ್ಬ, ಗಣೇಶ ಚತುರ್ಥಿ, ರಕ್ಷಾ ಬಂಧನ… ಹೀಗೆ ಒಂದರ ಹಿಂದೆ ಒಂದು ಬರತೊಡಗುತ್ತದೆ.
ಪಂಚಮಿಯ ದಿನ, ಹಾವಿಗೆ ಹಾಲಿನಿಂದ ಅಭಿಷೇಕವನ್ನು ಮಾಡಿದರೆ ಶಾಶ್ವತ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಹಾವು ಕಡಿತದಿಂದ ರಕ್ಷಣೆಯನ್ನು ಪಡೆದುಕೊಳ್ಳಲು ಹಾಗೂ ಹಾವನ್ನೂ ದೇವರ ಸಮಾನವಾಗಿ ಕಂಡು, ಜನರು ಹಾವನ್ನು ಪೂಜಿಸುತ್ತಾರೆ. ಈ ದಿನ ಮನೆಯ ಪ್ರವೇಶ ದ್ವಾರದಲ್ಲಿ ನಾಗಮೂರ್ತಿಯನ್ನು ಮಾಡುವ ಸಂಪ್ರದಾಯವೂ ಚಾಲ್ತಿಯಲ್ಲಿದೆ. ಇದು ಹಾವಿನ ಕಾಟದಿಂದ ಮನೆಯನ್ನು, ಜನರನ್ನು ರಕ್ಷಿಸುತ್ತದೆ ಎನ್ನುವ ನಂಬಿಕೆಯಿದೆ.