ಬೆಂಗಳೂರಿನ ಬಹು ನಿರೀಕ್ಷಿತ ನಮ್ಮ ಮೆಟ್ರೋ ಹಸಿರು ಮಾರ್ಗದ ಮುಂದುವರೆದ ಮಾರ್ಗ ನಾಗಸಂದ್ರದಿಂದ ಮಾದಾವರವರೆಗೆ ಸಂಚಾರಕ್ಕೆ ಮುಕ್ತವಾಗಿದೆ. ಈ ಹಿನ್ನಲೆ ಮಾದಾವರ ಮೆಟ್ರೋ ತೆರೆಯಲು ಅನುಮತಿ ನೀಡುವಂತೆ ಸಂಸದ ತೇಜಸ್ವಿ ಸೂರ್ಯ ಅವರು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್ ಲಾಲ್ ಖಟ್ಟರ್ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.
ಬೆಂಗಳೂರು ಮೆಟ್ರೋದ ಹಸಿರು ಮಾರ್ಗದ ನಾಗಸಂದ್ರ-ಮಾದಾವರ ವಿಸ್ತರಣೆಗಾಗಿ, ಇತ್ತೀಚೆಗೆ ಮೆಟ್ರೋ ರೈಲ್ವೆ ಸುರಕ್ಷತೆ (ದಕ್ಷಿಣ ವೃತ್ತ) ಆಯುಕ್ತರಿಂದ, BMRCL ಶಾಸನಬದ್ಧ ಸುರಕ್ಷತಾ ಅನುಮತಿಯನ್ನು ಪಡೆದಿದೆ. ಮಂಜುನಾಥ್ ನಗರ, ಚಿಕ್ಕಬಿದರಕಲ್ಲು ಮತ್ತು ಮಾದಾವರ ಮೂರು ನಿಲ್ದಾಣಗಳನ್ನು ಒಳಗೊಂಡಿರುವ 3.14 ಕಿಮೀ ಮಾರ್ಗವು, ಬೆಂಗಳೂರು ಮೆಟ್ರೋ ಜಾಲವನ್ನು 77 ಕಿಮೀಗೆ ಹೆಚ್ಚಿಸಲಿದೆ. ಇದರಿಂದ ತುಮಕೂರು ಹೆದ್ದಾರಿಯಲ್ಲಿನ ಜನದಟ್ಟಣೆಯನ್ನು ನಿವಾರಿಸುತ್ತದೆ. ಈ ಮಾರ್ಗವನ್ನು ಶೀಘ್ರವಾಗಿ ತೆರೆಯಲು ನಿಮ್ಮ ಅನುಮೋದನೆಯನ್ನು ನೀಡುವಂತೆ ಕೋರಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಚಿವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಇನ್ನು ನಮ್ಮ ಮೆಟ್ರೋದ ಗ್ರೀನ್ ಲೈನ್ ವಿಸ್ತರಣೆಯು ಮುಂದಿನ ಕೆಲವು ದಿನಗಳಲ್ಲಿ ತೆರೆಯುವ ಸಾಧ್ಯತೆಯಿದ್ದು, ಬಿಎಂಆರ್ಸಿಎಲ್ 3.14 ಕಿ.ಮೀ ಉದ್ದದ ಮಾರ್ಗವನ್ನು ಉದ್ಘಾಟಿಸಲು ಸರ್ಕಾರದ ಹಿರಿಯ ಸಚಿವರಿಂದ ದಿನಾಂಕವನ್ನು ಕೇಳಿದೆ. ತುಮಕೂರು ರಸ್ತೆಯ ಹಸಿರು ಮಾರ್ಗದಲ್ಲಿ ಇದೇ ತಿಂಗಳಿನಲ್ಲಿ ನಮ್ಮ ಮೆಟ್ರೋ ರೈಲು ಸಂಚಾರ ಆರಂಭವಾಗಲಿದೆ. ಮೆಟ್ರೋ ರೈಲು ಸುರಕ್ಷತಾ ಆಯುಕ್ತರು ಮೆಟ್ರೋ ರೈಲು ವಾಣಿಜ್ಯ ಸಂಚಾರಕ್ಕೆ ಒಪ್ಪಿಗೆ ಕೊಟ್ಟಿದ್ದಾರೆ. ಉದ್ಘಾಟನಾ ದಿನಾಂಕವನ್ನು ಕರ್ನಾಟಕ ಸರ್ಕಾರ ನಿಗದಿ ಮಾಡಬೇಕಿದೆ.