ನಮ್ಮ ಮೆಟ್ರೋ ಹಳದಿ ಮಾರ್ಗದ ಬೊಮ್ಮನಹಳ್ಳಿಯಿಂದ ಆರ್.ವಿ.ರಸ್ತೆ ನಡುವೆ ತೂಕ ಸಾಮರ್ಥ್ಯದ ಸಂಬಂಧಿತ ಆಸಿಲೇಷನ್ ಮತ್ತು ಎಲೆಕ್ಟ್ರಾನಿಕ್ ಬ್ರೇಕರ್ಸ್ ಡಿಸ್ಟ್ರಿಬ್ಯೂಷನ್ ಪ್ರಾಯೋಗಿಕ ಸಂಚಾರ ಮುಂದಿನ 10 ದಿನ ನಡೆಯಲಿದೆ. ಲಖನೌ ಮೂಲದ ಸಂಶೋಧನಾ ವಿನ್ಯಾಸ ಮತ್ತು ಗುಣಮಟ್ಟ ಸಂಸ್ಥೆ ಅಧಿಕಾರಿಗಳು ಈ ತಪಾಸಣೆ ನಡೆಸುತ್ತಿದ್ದಾರೆ. ಈ ಸಂಸ್ಥೆ ಪ್ರಾಯೋಗಿಕ ವರದಿ ಸಲ್ಲಿಸಿದ ಬಳಿಕ ರೈಲ್ವೆ ಮಂಡಳಿಯಿಂದ ತಾಂತ್ರಿಕ ಮಂಜೂರಾತಿ ಪಡೆಯಲಾಗುವುದು ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ತಿಳಿಸಿದೆ.
ಆಸಿಲೇಷನ್ ಮತ್ತು ಇಬಿಡಿ ಪ್ರಾಯೋಗಿಕ ಸಂಚಾರದ ಭಾಗವಾಗಿ ಮೆಟ್ರೋ ರೈಲಿನಲ್ಲಿ ಮರಳು ಮೂಟೆ ತುಂಬಿಸಿ ಭಾರ ಪರೀಕ್ಷೆ, ಬೋಗಿಯಲ್ಲಿ ನೀರನ್ನು ತುಂಬಿಸಿ ನಿಯಂತ್ರಣ ಪರೀಕ್ಷೆ ಮಾಡಲಾಗುತ್ತದೆ. ರೈಲು ವೇಗವಾಗಿ ಮತ್ತು ನಿಧಾನಕ್ಕೆ ಹೋಗುವಾಗ ನಿಯಂತ್ರಣಕ್ಕೆ ತರುವುದನ್ನು ಪರೀಕ್ಷಿಸಲಾಗುತ್ತದೆ. ಈ ವೇಳೆ ಬ್ರೇಕ್ ಪರೀಕ್ಷೆ ಕೂಡ ನಡೆಯಲಿದೆ. 19 ಕಿ.ಮೀ. ಉದ್ದ ಈ ಮಾರ್ಗ ಹೊಂ ದಿದ್ದು, 16 ನಿಲ್ದಾಣ ಒಳಗೊಂಡಿದೆ. ಚಾಲಕ ರಹಿತವಾಗಿ ಮೆಟ್ರೋ ರೈಲು ಇಲ್ಲಿ ಸಂಚರಿಸಲಿದೆ. ಸದ್ಯ ಆರು ಸೆಟ್ಗಳ ಒಂದು ರೈಲು ಪ್ರಾಯೋಗಿಕ ಸಂಚಾರ ನಡೆಸುತ್ತಿದ್ದು, ಇನ್ನಷ್ಟು ರೈಲುಗಳು ಬರಬೇಕಿದೆ. ಈ ವರ್ಷದ ಅಂತ್ಯದಲ್ಲಿ ಈ ಮಾರ್ಗದಲ್ಲಿ ವಾಣಿಜ್ಯ ಸಂಚಾರ ಆರಂಭವಾಗುವ ನಿರೀಕ್ಷೆಯಿದೆ.