ಪ್ರಧಾನಿ ನರೇಂದ್ರ ಮೋದಿ ಗುರುವಾರ ಕೆಂಪುಕೋಟೆಯಿಂದ ಸ್ವಾತಂತ್ರ್ಯ ದಿನಾಚರಣೆಯ ಸತತ 11ನೇ ಭಾಷಣ ಮಾಡಲಿದ್ದಾರೆ. ಸತತ ಮೂರನೇ ಅವಧಿಗೆ ದಾಖಲೆಯ ಪ್ರಧಾನಿಯಾದ ನಂತರದ ಅವರ ಮೊದಲ ಸ್ವಾತಂತ್ರ್ಯ ದಿನಾಚರಣೆ ಭಾಷಣ ಇದಾಗಲಿದೆ. ಈ ಮೂಲಕ ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು ಮತ್ತು ಅವರ ಪುತ್ರಿ ಇಂದಿರಾ ಗಾಂಧಿಯವರ ನಂತರ ಸತತ 11ನೇ ಬಾರಿಗೆ ದೆಹಲಿಯ ಕೆಂಪು ಕೋಟೆಯಿಂದ ಆಗಸ್ಟ್ 15ರ ಕಾರ್ಯಕ್ರಮ ಉದ್ದೇಶಿಸಿ ಭಾಷಣ ಮಾಡುವ ದಾಖಲೆಯನ್ನು ಸರಿಗಟ್ಟಲು ಸಜ್ಜಾಗಿದ್ದಾರೆ.
ಕಾಂಗ್ರೆಸ್ ದಿಗ್ಗಜ ನೆಹರು ಅವರು ಕೆಂಪು ಕೋಟೆಯಿಂದ 17 ಬಾರಿ ಸತತ ಭಾಷಣ ಮಾಡಿದ್ದರೆ, ಇಂದಿರಾ ಗಾಂಧಿ 1966 ಜನವರಿಯಿಂದ 1977 ಮಾರ್ಚ್ ವರೆಗೆ ಹಾಗೂ ಪುನಃ 1980 ಜನವರಿಯಿಂದ 1984 ಅಕ್ಟೋಬರ್ವರೆಗೆ ಒಟ್ಟು 16 ಬಾರಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ್ದರು. ಇಂದಿರಾ ಕೂಡ ಸತತ 11 ಭಾಷಣಗಳನ್ನು ಮಾಡಿದ್ದರು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ರ 10 ಸ್ವಾತಂತ್ರ್ಯ ದಿನಾಚರಣೆ ಭಾಷಣದ ದಾಖಲೆಯನ್ನೂ ಮೋದಿ ಮುರಿಯಲಿದ್ದಾರೆ.