ಮಂಗಳ ಗ್ರಹದಲ್ಲಿ ನೀರಿನ ಸಂಗ್ರಹ ಇದೆ ಎಂದು ನಾಸಾ ಪತ್ತೆ ಹಚ್ಚಿದೆ. ಮಂಗಳನ ನೆಲದ ಆಳದಲ್ಲಿ ದ್ರವ ರೂಪದಲ್ಲಿ ನೀರಿನ ಸಂಗ್ರಹ ಇದೆ ಎಂದು ನಾಸಾದ ಅಧ್ಯಯನ ವರದಿ ಬಹಿರಂಗಪಡಿಸಿದೆ. ಅಮೆರಿಕದ ಪ್ರತಿಷ್ಠಿತ ಬಾಹ್ಯಾಕಾಶ ಸಂಸ್ಥೆ ನಾಸಾ ಮಂಗಳ ಗ್ರಹಕ್ಕೆ ಮಾರ್ಸ್ ಇನ್ಸೈಟ್ ಲ್ಯಾಂಡರ್ ರವಾನಿಸಿತ್ತು. ಇದೊಂದು ರೋಬೋಟಿಕ್ ಉಪಕರಣವಾಗಿದ್ದು, 2018ರಲ್ಲಿ ಮಂಗಳನ ಅಂಗಳದಲ್ಲಿ ಇಳಿದಿತ್ತು. ಈ ಲ್ಯಾಂಡರ್ನಲ್ಲಿ ಭೂಕಂಪ ಮಾಪಕವನ್ನೂ ಅಳವಡಿಕೆ ಮಾಡಲಾಗಿತ್ತು.
ಈ ಮಾಪಕವು ಮಂಗಳ ಗ್ರಹದಲ್ಲಿ ಒಟ್ಟು 1,300 ಕಂಪನಗಳನ್ನು ಪತ್ತೆ ಮಾಡಿತ್ತು. 2 ವರ್ಷಗಳ ಅವಧಿಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಬಾರಿ ಮಂಗಳ ಗ್ರಹ ಕಂಪಿಸಿತ್ತು. ಮಂಗಳ ಗ್ರಹದ ಗರ್ಭದಲ್ಲಿ ಉಂಟಾಗುವ ಬದಲಾವಣೆಗಳ ಕಾರಣಕ್ಕೆ ಈ ಕಂಪನಗಳು ಸಂಭವಿಸುತ್ತಿದ್ದು, ಇದಕ್ಕೆ ದ್ರವ ರೂಪದಲ್ಲಿ ಇರುವ ನೀರು ಕಾರಣ ಇರಬಹುದು ಎಂದು ಶಂಕಿಸಲಾಗಿದೆ. ನೀರಿನ ಇರುವಿಕೆ ದೃಢಪಟ್ಟ ಬಳಿಕ ಮಂಗಳ ಗ್ರಹದಲ್ಲಿ ಇರಬಹುದಾದ ಜೀವಿಗಳ ಕುರಿತಾಗಿಯೂ ಸಂಶೋಧನೆ ನಡೆಯಲಿದೆ.
ಮಂಗಳ ಗ್ರಹದಲ್ಲಿ ನೀರಿನ ಇರುವಿಕೆ ಕುರಿತಾಗಿ ಇದೇ ಮೊದಲ ಬಾರಿಗೆ ಸಾಕ್ಷ್ಯ ಲಭ್ಯವಾಗಿದೆ. ಮಂಗಳ ಗ್ರಹದ ನೆಲದ ಆಳದಲ್ಲಿ ಇರುವ ಬಂಡೆಗಳ ನಡುವೆ ನೀರು ಇರಬಹುದು ಎಂದು ಭಾವಿಸಲಾಗಿದೆ. ಜೊತೆಗೆ ಈ ನೀರು ಮಂಗಳನ ಮೇಲ್ಮೈನಿಂದ ಆಳದಲ್ಲಿ ಇರುವ ಕಾರಣ ಅಲ್ಲಿಗೆ ತಲುಪುವುದು ಕೂಡಾ ಕಷ್ಟಕರ ಆಗಬಹುದು. ಏಕೆಂದರೆ ಮಂಗಳ ಗ್ರಹದ ಮೇಲ್ಮೈನಿಂದ ಸುಮಾರು 7 ರಿಂದ 12 ಮೈಲಿ ಒಳಗೆ ನೀರಿನ ಸಂಗ್ರಹ ಇರಬಹುದು ಎಂದು ಭಾವಿಸಲಾಗಿದೆ. ಕಿಲೋ ಮೀಟರ್ ಲೆಕ್ಕದಲ್ಲಿ ಹೇಳೋದಾದರೆ 11 ರಿಂದ 20 ಕಿ.ಮೀ. ನೆಲದ ಆಳದಲ್ಲಿ ನೀರು ಇರಬಹುದು.
ಮಂಗಳ ಗ್ರಹಗಳಲ್ಲಿ ಕೋಟ್ಯಂತರ ವರ್ಷಗಳ ಹಿಂದೆ ಸಮುದ್ರ, ನದಿಗಳು, ಕೆರೆಗಳು ಇದ್ದ ಸಂದರ್ಭದಲ್ಲಿ ಇಲ್ಲಿನ ನೀರು ನೆಲದ ಆಳಕ್ಕೆ ಇಳಿದಿರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ಅಮೆರಿಕದ ಸ್ಯಾನ್ ಡಿಯಾಗೋದಲ್ಲಿ ಇರುವ ಕ್ಯಾಲಿಫೋರ್ನಿಯಾ ವಿಶ್ವ ವಿದ್ಯಾಲಯದ ವಿಜ್ಞಾನಿಗಳಾದ ವಶನ್ ರೈಟ್ ಅವರು ಈ ಅಂದಾಜನ್ನು ಮಾಡಿದ್ದು, ಇದು ಈವರೆಗಿನ ಅತಿ ಉತ್ತಮ ಸಾಕ್ಷ್ಯ ಎಂದಿದ್ದಾರೆ.