ಅಮೆರಿಕ ಅಧ್ಯಕ್ಷ ಜೋ ಬೈಡನ್ ಅನಾರೋಗ್ಯ ಕಾರಣಕ್ಕೆ ಮುಂಬರುವ ಅಧ್ಯಕ್ಷೀಯ ಚುನಾವಣಾ ಸ್ಪರ್ಧಾ ಕಣದಿಂದ ಹಿಂದಕ್ಕೆ ಸರಿದಿದ್ದಾರೆ. ಅಷ್ಟೇ ಅಲ್ಲ, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ಹೆಸರನ್ನು ಅಭ್ಯರ್ಥಿ ಸ್ಥಾನಕ್ಕೆ ಶಿಫಾರಸು ಮಾಡಿದ್ದಾರೆ. ಅಮೆರಿಕ ಅಧ್ಯಕ್ಷ ಸ್ಥಾನದಲ್ಲಿರುವಾಗ ರಾಜೀನಾಮೆ ನೀಡಿದರೆ ಅಥವಾ ಮೃತಪಟ್ಟರೆ ಉಪಾಧ್ಯಕ್ಷರಾಗಿರುವವರು ಅಧ್ಯಕ್ಷ ಸ್ಥಾನಕ್ಕೆ ಏರುತ್ತಾರೆ. ಆದರೆ, ಚುನಾವಣೆ ಇನ್ನೂ ನಡೆಯಬೇಕಿರುವುದರಿಂದ ಪಕ್ಷದ ಅಧಿಕೃತ ಅಭ್ಯರ್ಥಿ ಸ್ಪರ್ಧಾ ಕಣದಿಂದ ಹಿಂದಕ್ಕೆ ಸರಿದರೆ ಉಪಾಧ್ಯಕ್ಷೆ ಅಭ್ಯರ್ಥಿಯೇ ಆ ಸ್ಥಾನಕ್ಕೆ ಏರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಅಂತಿಮವಾಗಿ ಪಕ್ಷ ತೀರ್ಮಾನ ಮಾಡುತ್ತದೆ.
ಜೋ ಬೈಡನ್, ಕಮಲಾ ಹ್ಯಾರಿಸ್ ಡೆಮಾಕ್ರಾಟ್ ಪಕ್ಷದವರು. ಅಧ್ಯಕ್ಷೀಯ ಚುನಾವಣೆ ರೇಸ್ನಿಂದ ಜೋ ಬೈಡನ್ ಹಿಂದಕ್ಕೆ ಸರಿದಿದ್ದಾರೆ. ಈಗ ಡೆಮಾಕ್ರಾಟ್ ಪಕ್ಷದ ರಾಷ್ಟ್ರೀಯ ಸಭೆಯಲ್ಲಿ ಅಭ್ಯರ್ಥಿ ಆಯ್ಕೆ ನಡೆಯುತ್ತದೆ. ಜೋ ಬೈಡನ್ ಮಾಡಿರುವ ಶಿಫಾರಸು ಕಮಲಾ ಹ್ಯಾರಿಸ್ಗೆ ಒಂದು ಶಕ್ತಿಯಾಗುತ್ತದೆಯೇ ಹೊರತು ಅವರೇ ಅಭ್ಯರ್ಥಿ ಎನ್ನುವುದನ್ನು ಖಾತ್ರಿಪಡಿಸುವುದಿಲ್ಲ. ಡೆಮಾಕ್ರಟಿಕ್ನ ನ್ಯಾಷನಲ್ ಕನ್ವೆನ್ಷನ್, ಅಥವಾ ರಾಷ್ಟ್ರೀಯ ಸಭೆಯಲ್ಲಿ 3,900 ನಿಯೋಗಗಳಿವೆ. ತಮ್ಮ ರಾಜ್ಯಗಳ ಡೆಮಾಕ್ರಾಟ್ ಮತದಾರರನ್ನು ಪ್ರತಿನಿಧಿಸುವ ಈ ನಿಯೋಗಗಳು ಸೇರಿ ಪಕ್ಷದ ಅಧಿಕೃತ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಾರೆ. ಶಾಲಾ ಬೋರ್ಡ್ ಸದಸ್ಯರು, ಕಾರ್ಮಿಕ ಕಾರ್ಯಕರ್ತರು, ವಕೀಲರು ಇತ್ಯಾದಿ ವಿವಿಧ ಸ್ತರದ ಜನರು ಇದರಲ್ಲಿ ಇರುತ್ತಾರೆ. ಡೆಮಾಕ್ರಟಿಕ್ ಪಕ್ಷಕ್ಕೆ ಸೇರಿದ ಗವರ್ನರ್ಗಳು, ಸಂಸದರು, ಪಕ್ಷದ ಪದಾಧಿಕಾರಿಗಳೂ ಕೂಡ ನಿಯೋಗ ಸದಸ್ಯರಾಗಿರುತ್ತಾರೆ. ಈ ಪ್ರತಿನಿಧಿಗಳಲ್ಲಿ ಹೆಚ್ಚಿನವರು ಜೋ ಬೈಡನ್ಗೆ ಬೆಂಬಲ ನೀಡಿದ್ದರು. ಈಗ ಕಮಲಾ ಹ್ಯಾರಿಸ್ಗೆ ಇವರು ಬೆಂಬಲ ಮುಂದುವರಿಸಬೇಕು ಎಂದೇನಿಲ್ಲ. ಯಾರಿಗೆ ಬೇಕಾದರೂ ಇವರು ಬೆಂಬಲಿಸಬಹುದು.