ಬಾಹ್ಯಕಾಶ ಕ್ಷೇತ್ರದಲ್ಲಿ ಇಡೀ ವಿಶ್ವವೇ ನಿಬ್ಬೆರಾಗುವಂತೆ ಮಾಡಿದ ಭಾರತದ ಸಾಧನೆ ಚಂದ್ರಯಾನ -3. ಹೌದು, ಇಂದು ಮೊದಲ ವರ್ಷದ ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನು ಆಚರಿಸಲಾಗುತ್ತಿದೆ. ಚಂದ್ರಯಾನ-3 ಮಿಷನ್ನ ಯಶಸ್ಸಿನ ಸ್ಮರಣಾರ್ಥವಾಗಿ ಆಗಸ್ಟ್ 23ರಂದು ಪ್ರತಿವರ್ಷ ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನಾಗಿ ಆಚರಿಸಲು ಕೇಂದ್ರ ಸರ್ಕಾರವು ನಿರ್ಧರಿಸಿದೆ.
ಕಳೆದ ವರ್ಷ 2023 ಆಗಸ್ಟ್ 23 ರಂದು ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ-3 ಯೋಜನೆಯ ವಿಕ್ರಮ್ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವ ಪ್ರದೇಶದ ಬಳಿಯ ‘ಶಿವ ಶಕ್ತಿ’ ಬಿಂದುವಿನಲ್ಲಿ ಯಶಸ್ವಿಯಾಗಿ ಇಳಿಯಿತು. ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿದ್ದ ಚಂದ್ರಯಾನ 3 ಸಾಫ್ಟ್ ಲ್ಯಾಂಡಿಂಗ್ ಯಶಸ್ವಿಯಾದ ಕ್ಷಣವಿದು. ಚಂದ್ರನ ದಕ್ಷಿಣ ಧ್ರುವ ಪ್ರದೇಶದ ಬಳಿ ಲ್ಯಾಂಡರ್ ಇಳಿಸಿದ ಮೊದಲ ರಾಷ್ಟ್ರ ಎನ್ನುವ ಹೆಗ್ಗಳಿಕೆಗೆ ಭಾರತವು ಪಾತ್ರವಾಯಿತು. ಈ ಹಿನ್ನಲೆಯಲ್ಲಿ ಪ್ರತಿ ವರ್ಷ ಆಗಸ್ಟ್ 23 ರಂದು ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನು ಆಚರಿಸಲು ಮುಂದಾಗಿದೆ.
ರಾಷ್ಟ್ರೀಯ ಬಾಹ್ಯಾಕಾಶ ದಿನದ ಮೊದಲ ವರ್ಷದ ಥೀಮ್:
ಚಂದ್ರಯಾನ -3 ಲ್ಯಾಂಡರ್ ಚಂದ್ರನನ್ನು ಸ್ಪರ್ಶಿಸಿದ ದಿನವಾದ ಆಗಸ್ಟ್ 23 ಅನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನವಾಗಿ ಆಚರಿಸಲಾಗುತ್ತಿದೆ. ಭಾರತವು ತನ್ನ ಮೊದಲ ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನು 2024ರ ಆಗಸ್ಟ್ 23ರಂದು ‘ಚಂದ್ರನನ್ನು ಸ್ಪರ್ಶಿಸುವಾಗ ಜೀವನವನ್ನು ಸ್ಪರ್ಶಿಸುವುದು: ಭಾರತದ ಬಾಹ್ಯಾಕಾಶ ಕಥೆ’ ಎಂಬ ಧ್ಯೇಯವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ದೇಶದ ಬಾಹ್ಯಾಕಾಶ ಸಾಧನೆಗಳನ್ನು ಪ್ರದರ್ಶಿಸಲು ಕೇಂದ್ರವು ಸರಿಸುಮಾರು ಒಂದು ತಿಂಗಳ ಕಾರ್ಯಕ್ರಮವನ್ನು ಆಯೋಜನೆ ಮಾಡಿದೆ.