ಚಂದ್ರಘಂಟಾ ದೇವಿಯ ಶರೀರದ ಬಣ್ಣ ಚಿನ್ನದಂತೆ ಫಳಫಳಿಸುತ್ತದೆ. ಹತ್ತು ಕೈಗಳಿದ್ದು, ಎಲ್ಲದರಲ್ಲೂ ಖಡ್ಗ ಮೊದಲಾದ ಶಸ್ತ್ರ, ಬಾಣಗಳಿವೆ. ಆಕೆಯ ವಾಹನ ಸಿಂಹವಾಗಿದ್ದು, ಯುದ್ಧಕ್ಕೆ ಹೊರಟಂತಹ ಮುದ್ರೆ ಇದೆ. ದೇವಿಯ ಆರಾಧನೆಯಿಂದ ಸಂಪತ್ತು, ಸಮೃದ್ಧಿ ದೊರೆಯುತ್ತದೆ. ಮನೆಯಲ್ಲಿ ಯಾವತ್ತಿಗೂ ಆಹಾರದ ಕೊರತೆ ಬಾರದು.
ಶರನ್ನವರಾತ್ರಿಯ ಮೂರನೇ ದಿನ ದೇವಿಯನ್ನು ಚಂದ್ರಘಂಟಾ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಚಂದ್ರಿಕಾ, ರಣಚಂಡಿ ಅಂತಲೂ ಕರೆಯುತ್ತಾರೆ. ಆ ದೇವಿಯ ವಿಗ್ರಹವನ್ನು ಇರಿಸಿ, ಪೂಜೆ- ಆರಾಧನೆಯನ್ನು ಮಾಡಲಾಗುತ್ತದೆ. ಈ ದೇವಿಯ ಸ್ವರೂಪವು ಶಾಂತ ರೀತಿಯಲ್ಲಿ ಇರುತ್ತದೆ, ಮತ್ತು ಶ್ರೇಯಸ್ಸನ್ನು ನೀಡುತ್ತದೆ. ತಾಯಿಯ ತಲೆ ಮೇಲೆ ಗಂಟೆಯ ಆಕಾರದಲ್ಲಿ ಅರ್ಧ ಚಂದ್ರ ಇರುವುದರಿಂದ ಚಂದ್ರಘಂಟಾ ದೇವಿ ಎಂಬ ಹೆಸರಿನಿಂದ ಕರೆಯಲಾಗುತ್ತದೆ.
ಆಕೆಯ ಶರೀರದ ಬಣ್ಣ ಚಿನ್ನದಂತೆ ಫಳಫಳಿಸುತ್ತದೆ. ಹತ್ತು ಕೈಗಳಿದ್ದು, ಎಲ್ಲದರಲ್ಲೂ ಖಡ್ಗ ಮೊದಲಾದ ಶಸ್ತ್ರ, ಬಾಣಗಳಿವೆ. ಆಕೆಯ ವಾಹನ ಸಿಂಹವಾಗಿದ್ದು, ಯುದ್ಧಕ್ಕೆ ಹೊರಟಂತಹ ಮುದ್ರೆ ಇದೆ. ಆಕೆಯ ಘಂಟೆಯಾಕಾರದ ಚಂದ್ರನ ಶಬ್ದವನ್ನು ಕೇಳಿ ದುಷ್ಟರು ತಮ್ಮ ಶಕ್ತಿಯನ್ನು ಕಳೆದುಕೊಂಡಂತೆ ನಿಶ್ಶಕ್ತರಾಗುತ್ತಾರೆ.
ಯಾರು ಆ ದೇವಿಯನ್ನು ಶ್ರದ್ಧಾ- ಭಕ್ತಿಯಿಂದ ಆರಾಧನೆ ಮಾಡುತ್ತಾರೋ ಅಂಥವರಿಗೆ ಅಲೌಕಿಕವಾದ ಅನುಭವ ಆಗುತ್ತದೆ. ದಿವ್ಯವಾದ ಸುಗಂಧಗಳ ಸುತ್ತ ಇರುವಂತೆ ಭಾಸವಾಗುತ್ತದೆ. ಹಿಂದೆಂದೂ ಕಂಡರಿಯದಂಥ ವಿಶಿಷ್ಟ ಧ್ವನಿಗಳು ಕೇಳಿಬರುತ್ತವೆ. ಅಂಥವರ ಸಕಲ ಪಾಪಗಳು ನಶಿಸಿ ಹೋಗುತ್ತವೆ. ಆರಾಧಕನಾದವನಿಗೆ ಪರಾಕ್ರಮ ಬರುತ್ತದೆ. ಚಂದ್ರಘಂಟಾ ದೇವಿಯ ಆ ಧ್ವನಿಯ ಮಾತ್ರದಿಂದಲೇ ಪ್ರೇತಬಾಧೆ ಮೊದಲಾದವುಗಳಿಂದ ರಕ್ಷಣೆ ದೊರೆಯುತ್ತದೆ. ಹಲವು ಕಷ್ಟಗಳು ನಿವಾರಣೆ ಆಗುತ್ತವೆ.
ಚಂದ್ರಘಂಟಾ ದೇವಿಯು ಶುಕ್ರ ಗ್ರಹದ ಅಧಿದೇವತೆ ಆಗಿದ್ದು, ದೇವಿಯ ಆರಾಧನೆಯಿಂದ ಸಂಪತ್ತು, ಸಮೃದ್ಧಿ ದೊರೆಯುತ್ತದೆ. ಮನೆಯಲ್ಲಿ ಯಾವತ್ತಿಗೂ ಆಹಾರದ ಕೊರತೆ ಬಾರದು.
ಚಂದ್ರಘಂಟಾ ದೇವಿಯ ಪೂಜಾ ವಿಧಿ:
ಚಂದ್ರಘಂಟಾ ದೇವಿಗೆ ಮಲ್ಲಿಗೆ ಹೂವು ಅರ್ಪಿಸಿ, ಪೂಜೆ ಮಾಡಿ ಹಾಗೂ ಭಕ್ತಿಯಿಂದ ಧ್ಯಾನ ಮಾಡಬೇಕು. ಇದರ ಜತೆಗೆ 16 ಬಗೆಯ ಅರ್ಪಣೆ ನೀಡಿ, ಆರತಿ ಮಾಡಬೇಕು. ಕೆಂಪು ಬಣ್ಣದ ಬಟ್ಟೆಯ ಅಲಂಕಾರ ಮಾಡಿದಲ್ಲಿ ಆ ತಾಯಿಯು ಆರಾಧಕರ ಕುಟುಂಬಕ್ಕೆ ಶ್ರೇಯಸ್ಸನ್ನು ನೀಡುತ್ತಾಳೆ.
ಚಂದ್ರಘಂಟಾ ದೇವಿಯ ಕಥೆ:
ಆ ಜಗಜ್ಜನನಿಯು ಶಿವನನ್ನು ವಿವಾಹ ಆಗಬೇಕಾದ ಸಂದರ್ಭದಲ್ಲಿ ಆ ಮಹಾದೇವ ತನ್ನ ಸಕಲ ಗಣಗಳ ಜತೆಗೆ ಮದುವೆ ನಡೆಯುವ ಸ್ಥಳವನ್ನು ಪ್ರವೇಶಿಸುತ್ತಾನೆ. ಆ ಭಯಂಕರವಾದ ರೂಪವನ್ನು ಕಂಡು ಮಾತೆ ಮೂರ್ಛೆ ಹೋಗುತ್ತಾಳೆ. ಆ ಚಂದ್ರಘಂಟಾ ರೂಪದಲ್ಲಿ ಕಾಣಿಸಿಕೊಂಡ ದೇವಿಯು, ಶಿವನು ರಾಜಕುಮಾರನಂತೆ ಕಾಣಿಸಿಕೊಳ್ಳಬೇಕು ಎಂದು ಪ್ರಾರ್ಥಿಸಿದಾಗ ಅದರಂತೆಯೇ ಶಿವನು ರೂಪ ತಾಳುತ್ತಾನೆ. ಆಗ ಶಿವ- ಪಾರ್ವತಿಯ ವಿವಾಹ ನೆರವೇರುತ್ತದೆ.
ಕೆಂಪು ಬಣ್ಣಕ್ಕೆ ಆದ್ಯತೆ:
ನವರಾತ್ರಿಯ ಮೂರನೇ ದಿನ ಕೆಂಪು ಬಣ್ಣಕ್ಕೆ ಆದ್ಯತೆ ನೀಡಲಾಗುತ್ತದೆ. ಚಂದ್ರಘಂಟಾ ದೇವಿಯು ಧೈರ್ಯ, ಪರಾಕ್ರಮ ಹಾಗೂ ಸೌಂದರ್ಯದ ಪ್ರತೀಕವಾಗಿದ್ದು, ಕೆಂಪು ಬಣ್ಣದ ವಸ್ತ್ರಗಳಿಂದ ತಾಯಿಗೆ ಅಲಂಕಾರ, ಕೆಂಪು ಬಣ್ಣದ ಹೂವುಗಳಿಂದ ಪೂಜೆ ಮಾಡಲಾಗುತ್ತದೆ.