- ಗ್ರೇಸ್ ಮಾರ್ಕ್ಸ್ ನೀಡಿದ್ದ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ ನಿರ್ಧಾರ ರದ್ದು
- ಗ್ರೇಸ್ ಮಾರ್ಕ್ಸ್ ಪಡೆದ 1563 ವಿದ್ಯಾರ್ಥಿಗಳು ಮತ್ತೆ ಪರೀಕ್ಷೆಗೆ ಹಾಜರಾಗಬೇಕು
NEET UG 2024 ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ ನೀಡಿದೆ. NEET ಪರೀಕ್ಷೆಯ ಫಲಿತಾಂಶದ ವಿವಾದಗಳಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಭಯಪಡುವ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದೆ.
ಈ ವೇಳೆ ಸರ್ವೋಚ್ಛ ನ್ಯಾಯಾಲಯಕ್ಕೆ ಮಾಹಿತಿ ನೀಡಿದ ಕೇಂದ್ರ ಸರ್ಕಾರ, ಗ್ರೇಸ್ ಅಂಕಗಳನ್ನು ಪಡೆದ 1563 ವಿದ್ಯಾರ್ಥಿಗಳು ಮತ್ತೆ ಪರೀಕ್ಷೆಗೆ ಹಾಜರಾಗಬೇಕಾಗುತ್ತದೆ. ಗ್ರೇಸ್ ಮಾರ್ಕ್ ನೀಡಿದ್ದ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ ನಿರ್ಧಾರವನ್ನು ರದ್ದುಗೊಳಿಸಲಾಗಿದೆ ಎಂದು ಕೇಂದ್ರ ಸರ್ಕಾರ, ಸುಪ್ರೀಂ ಕೋರ್ಟ್ಗೆ ಹೇಳಿದೆ. ಆ ಅಭ್ಯರ್ಥಿಗಳಿಗೆ ಜೂನ್ 23ರಂದು ಪುನಃ ಪರೀಕ್ಷೆ ನಡೆಸಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಇನ್ನು ಈ ವೇಳೆ ಸುಪ್ರೀಂ ಕೋರ್ಟ್, ಕೌನ್ಸೆಲಿಂಗ್ ಮುಂದುವರಿಯಲಿದೆ. ಅದನ್ನು ನಿಲ್ಲಿಸುತ್ತಿಲ್ಲ. ಪರೀಕ್ಷೆ ಇದ್ದಾಗ ಎಲ್ಲವನ್ನೂ ಪೂರ್ಣವಾಗಿ ಮಾಡಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಯಾರೂ ಭಯಪಡುವ ಅಗತ್ಯವಿಲ್ಲ. ಪರೀಕ್ಷೆಯನ್ನು ಸಂಪೂರ್ಣವಾಗಿ ರದ್ದುಗೊಳಿಸುವುದು ಸರಿಯಾದ ಕ್ರಮವಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತು.
ವಿದ್ಯಾರ್ಥಿಗಳ ಭಯ ಹೋಗಲಾಡಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ ಎಂದು ಎನ್ಟಿಎ ಪರವಾಗಿ ಹೇಳಲಾಗಿದೆ. NEET UG 2024 ಪರೀಕ್ಷೆಯಲ್ಲಿ ಗ್ರೇಸ್ ಅಂಕಗಳನ್ನು ಪಡೆದ ಅಭ್ಯರ್ಥಿಗಳು ಪುನಃ ಹಾಜರಾಗಬೇಕಾಗುತ್ತದೆ. ಇದಾದ ಬಳಿಕವಷ್ಟೇ ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭಿಸಲಾಗುವುದು.