ಪರೀಕ್ಷಾ ಅಕ್ರಮದ ನಂತರ ನೀಟ್ ಪಿಜಿ ಪರೀಕ್ಷೆಯನ್ನು ರದ್ದುಪಡಿಸಲಾಗಿತ್ತು. ಅಲ್ಲದೇ ಈ ಸಂಬಂಧ ಸಿಬಿಐನಿಂದ ತನಿಖೆ ನಡೆಸಲಾಗುತ್ತಿದ್ದು, ಇದರ ಬೆನ್ನಲ್ಲೇ ಇದೀಗ ಇಂದು ನೀಟ್ ಪಿಜಿ ಪರೀಕ್ಷೆಗೆ ಪರಿಷ್ಕೃತ ದಿನಾಂಕವನ್ನು ಘೋಷಣೆ ಮಾಡಲಾಗಿದೆ. ಈ ಕುರಿತು ಮಾಹಿತಿಯನ್ನು ಎನ್ಟಿಎ ಬಿಡುಗಡೆ ಮಾಡಿದ್ದು, ಆಗಸ್ಟ್ 11ರಂದು ನೀಟ್ ಪಿಜಿ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಎರಡು ಪಾಳಿಯಲ್ಲಿ ನೀಟ್ ಪಿಜಿ ಪರೀಕ್ಷೆಯನ್ನು ನಡೆಸಲಾಗುತ್ತದೆ ಎಂದು ತಿಳಿಸಿದೆ.
ನೀಟ್ ಪಿಜಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ನಂತರ ಎನ್ಟಿಎಯಿಂದ ಪರೀಕ್ಷೆಯನ್ನೇ ರದ್ದುಪಡಿಸಲಾಗಿತ್ತು. ಈ ಕುರಿತು ಸಿಬಿಐ ತನಿಖೆಗೆ ಕೇಂದ್ರ ಸರ್ಕಾರ ಆದೇಶಿಸಿತ್ತು. ಈಗಾಗಲೇ ಪ್ರಮುಖ ಆರೋಪಿ ಸೇರಿದಂತೆ ಹಲವರನ್ನು ಸಿಬಿಐ ಬಂಧಿಸಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಹಿನ್ನೆಲೆ ಎನ್ಬಿಇಎಂಎಸ್(NBEMS) ಜೂನ್ 23ಕ್ಕೆ ನಿಗದಿಯಾಗಿದ್ದ ಪರೀಕ್ಷೆಯನ್ನು ಮುನ್ನೆಚ್ಚರಿಕೆ ಕ್ರಮವಾಗಿ ಮುಂದೂಡಿಕೆ ಮಾಡಲಾಗಿತ್ತು. ದೇಶಾದ್ಯಂತ ಸುಮಾರು 52,000 ಸ್ನಾತಕೋತ್ತರ ಸೀಟುಗಳಿಗೆ ಪ್ರತಿ ವರ್ಷ ಸುಮಾರು 2 ಲಕ್ಷ ಎಂಬಿಬಿಎಸ್ ಪದವೀಧರರು ನೀಟ್ ಪಿಜಿ ಪರೀಕ್ಷೆಯನ್ನು ತೆಗೆದುಕೊಳ್ಳುತ್ತಾರೆ. ಪರೀಕ್ಷಾ ಪ್ರಕ್ರಿಯೆಯ ದೃಢತೆಯನ್ನು ಪರಿಶೀಲನೆ ನಡೆಸಲು ಸಚಿವಾಲಯವು ಬಯಸಿದ್ದರಿಂದ ಮತ್ತು ಪ್ರಕ್ರಿಯೆಯಲ್ಲಿ ಯಾವುದೇ ದುರ್ಬಲತೆ ಇಲ್ಲ ಎಂದು ಖಚಿತಪಡಿಸಿಕೊಳ್ಳಲು ಬಯಸಿದ ಹಿನ್ನೆಲೆ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ ಎಂದು ಮಂಡಳಿಯ ಪ್ರಕಾರ ಪರೀಕ್ಷೆಯನ್ನು ರದ್ದುಪಡಿಸಲಾಗಿತ್ತು.
ನೀಟ್ ಪಿಜಿ 2024 ಪರೀಕ್ಷೆಯನ್ನು ಮೊದಲು ಮಾರ್ಚ್ 3ರಂದು ನಡೆಸಲು ನಿರ್ಧರಿಸಲಾಗಿತ್ತು. ನಂತರ ಜೂನ್ 7ಕ್ಕೆ ಮುಂದೂಡಿಕೆ ಮಾಡಲಾಯಿತು. ಆದರೆ ಸಾರ್ವತ್ರಿಕ ಚುನಾವಣೆಗಳ ಕಾರಣ ನೀಟ್ ಪಿಜಿ ಪರೀಕ್ಷೆಯ ದಿನಾಂಕವನ್ನು ಮತ್ತೆ ಜೂನ್ 23ಕ್ಕೆ ಮುಂದೂಡಲಾಗಿತ್ತು. ಇದೀಗ ಆಗಸ್ಟ್ 11ರಂದು ನೀಟ್ ಪಿಜಿ ಪರೀಕ್ಷೆಯನ್ನು ನಡೆಸಲು ಡೇಟ್ ಫಿಕ್ಸ್ ಆಗಿದೆ.