ಇಂದು ಮಧ್ಯಾಹ್ನ ನೆಲಮಂಗಲದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 6 ಜನ ದುರ್ಮರಣ ಹೊಂದಿದ್ದಾರೆ. ಈ ದುರ್ಘಟನೆಯಲ್ಲಿ ಲಾರಿ ಚಾಲಕ ಆರಿಫ್ ಬಚಾವ್ ಆಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ಬಗ್ಗೆ ಸ್ವತಃ ಲಾರಿ ಚಾಲಕ ಆರಿಫ್ ಮಾತನಾಡಿದ್ದು, ನನ್ನ ಮುಂದಿನ ಕಾರ್ ನಿಂದಾಗಿ ಅಪಘಾತ ಸಂಭವಿಸಿದೆ ಎಂದು ಹೇಳಿದ್ದಾರೆ.
ಡಾಬಸ್ಪೇಟೆಯಿಂದ ಬೆಂಗಳೂರಿನ ಕಡೆಗೆ ನಾನು ಬರುತ್ತಿದ್ದೆ. ನನ್ನ ಮುಂದಿನ ಕಾರನ್ನು ಸೇಫ್ ಮಾಡಲು ಹೋಗಿ ಅಪಘಾತವಾಗಿದೆ. ಲಾರಿ ಡಿವೈಡರ್ ದಾಟಿ ಮುಂದಿನ ರಸ್ತೆಗೆ ಪಲ್ಟಿ ಹೊಡೆದಿದೆ. ನನ್ನ ಮುಂದಿನ ಕಾರಿನಿಂದಾಗಿ ಹೀಗೆ ಆಯ್ತು. ನನಗೆ ತುಂಬಾ ನೋವಾಗ್ತಿದೆ. ಅಲ್ಲಿ ಏನಾಯ್ತು ಆಮೇಲೆ ಅನ್ನೋದು ಗೊತ್ತಿಲ್ಲ. ಕಾರಿನ ಮೇಲೆ ನನ್ನ ಲಾರಿ ಪಲ್ಟಿಯಾಗಿತ್ತು ಎಂದು ನೋವಿನಲ್ಲಿ ಮಾತನಾಡಿದ್ದಾರೆ.
ನೆಲಮಂಗಲದ ಟಿ.ಬೇಗೂರು ಬಳಿಯ ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಮಧ್ಯಾಹ್ನ (ಶನಿವಾರ) ನಡೆದ ಎರಡು ಕಾರು, ಎರಡು ಲಾರಿ ಹಾಗೂ ಸ್ಕೂಲ್ ಬಸ್ ನಡುವಿನ ಸರಣಿ ಅಪಘಾತದಲ್ಲಿ ಒಂದೇ ಕುಟುಂಬದ 6 ಮಂದಿ ದುರ್ಮರಣ ಹೊಂದಿದ್ದಾರೆ.