ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಫೋಟೋ ವೈರಲ್ ಆದ ಬಳಿಕ ಭಾರಿ ಚರ್ಚೆಯಾಗುತ್ತಿರುವ ವಿಷಯ ಏನೆಂದರೆ ಜೈಲಿನ ಒಳಗೆ ಮೋಬೈಲ್ ಫೋನ್ ಹೇಗೆ ಹೋಯ್ತು? ಅದರಲ್ಲೂ ಸಿಸಿಬಿ ದಾಳಿ ಮಾಡಿ ಪರಿಶಿಲಿಸಿದ ಬಳಿಕವೂ ಸೆಲ್ ಫೋನ್ ಹೇಗೆ ಬಂತು ಎಂಬ ಪ್ರಶ್ನೆ ಎಲ್ಲರಲ್ಲಿಯೂ ಮೂಡಿದೆ. ಪ್ರತಿ ಜೈಲಿನಲ್ಲೂ ಸೆಲ್ ಫೋನ್ ಚಟುವಟಿಕೆಗಳನ್ನು ನಿಯಂತ್ರಿಸುವ ಸಲುವಾಗಿ ನೆಟ್ವರ್ಕ್ ಜಾಮರ್ಅನ್ನು ಅಳವಡಿಸಲಾಗಿರುತ್ತದೆ.
ಇನ್ನೂ ಈ ಸೆಲ್ಯುಲರ್ ಜ್ಯಾಮಿಂಗ್ ಸಾಧನವನ್ನು ಬೇಕಾದಾಗ ಬಳಸಬಹುದು ಹಾಗೂ ನಿಯಂತ್ರಿಸಬಹುದಾಗಿದೆ. ಹಾಗೆಯೇ ಸೆಲ್ಯುಲರ್ ಜ್ಯಾಮಿಂಗ್ ಸಾಧನ ರಿಮೋಟ್ ಕಂಟ್ರೋಲ್ ಕಾರ್ಯಾಚರಣೆ ಪ್ರಯೋಜನವನ್ನು ಹೊಂದಿದೆ. ರಿಮೋಟ್ ಆನ್/ಆಫ್ ಮಾಡುವ ಮೂಲಕ ಇದನ್ನು ಸಕ್ರಿಯಗೊಳಿಸಬಹುದಾಗಿದೆ.
ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರದಲ್ಲಿಯೂ ಸಹ ನೆಟ್ವರ್ಕ್ ಜಾಮರ್ ಅಳವಡಿಸಲಾಗಿದೆ. ಇದು ಹೈ ಫ್ರೀಕ್ವೆನ್ಸಿ ಜಾಮರ್ ಆಗಿದ್ದು, ಇದರಿಂದ ಜೈಲಿನ ಆಸುಪಾಸಿನಲ್ಲಿರುವ ಮನೆಗಳು ನೆಟ್ವರ್ಕ್ ಸಮಸ್ಯೆ ಎದುರಿಸುವಂತಾಗಿ ಸ್ಥಳೀಯರು ದೂರು ನೀಡುತ್ತಿದ್ದರು. ಅವರ ಸಮಸ್ಯೆಯನ್ನು ಆಲಿಸಿದ ಅಧಿಕಾರಿಗಳು ಜೈಲು ಜಾಮರನ್ನು ಸ್ವಲ್ಪ ಮಟ್ಟಿಗೆ ಸಡಿಲಿಕೆ ಮಾಡಿದ್ದರು. ಆದರೆ ಇದನ್ನೇ ಬಂಡವಾಳ ಮಾಡಿಕೊಂಡ ಕೈದಿಗಳು ಸ್ಮಾರ್ಟ್ಫೋನ್ ಬಳಕೆಯ ಜೊತೆಗೆ ವಿಡಿಯೋ ಕರೆ ಮಾಡಿದ್ದಾರೆ ಎಂಬುದು ದರ್ಶನ್ ವಿಡಿಯೋ ಕಾಲ್ ವೈರಲ್ ಆದ ಬಳಿಕ ಬಯಲಾಗಿದೆ.
ಆದರೀಗ ನೆಟ್ವರ್ಕ್ ಜಾಮರ್ ಇದ್ದರೂ ಇಲ್ಲದಿದ್ದರೂ ಜೈಲಿನ ಒಳಗೆ ಸ್ಮಾರ್ಟ್ಫೋನ್ ಹೇಗೆ ಬಂತು ಎಂಬ ಅನುಮಾನ ದೊಡ್ಡದಾಗಿ ಕಾಡುತ್ತಿದೆ. ಸ್ಥಳೀಯರಿಗೆ ಆಗುವ ನೆಟ್ವರ್ಕ್ ಸಮಸ್ಯೆ ಕೈದಿಗಳಿಗೆ ಯಾಕಾಗುತ್ತಿಲ್ಲ ಎಂಬ ಮತ್ತೊಂದು ಅನುಮಾನ ಹುಟ್ಟಿಕೊಂಡಿದೆ. ಆದರೆ ಇವೆಲ್ಲದ್ದಕ್ಕೆ ಸರಿಯಾದ ತನಿಖೆ ಮೇಲೆ ಉತ್ತರ ಸಿಗಬೇಕಿದೆ.