ಕೇಂದ್ರ ಸರ್ಕಾರ ಬ್ಯಾಂಕಿಂಗ್ ಕಾನೂನುಗಳ (ತಿದ್ದುಪಡಿ) ಮಸೂದೆ, 2024 ಅನ್ನು ಇಂದು ಸಂಸತ್ತಿನಲ್ಲಿ ಮಂಡಿಸಿದ್ದು, ಬ್ಯಾಂಕ್ ಖಾತೆಗೆ ಹೆಸರಿಸಬಹುದಾದ ನಾಮಿನಿಗಳ ಸಂಖ್ಯೆ ಹೆಚ್ಚಳ ಸೇರಿ ನಿಯಮಗಳಲ್ಲಿ ಹಲವು ಬದಲಾವಣೆ ಮಾಡಲಾಗಿದೆ. ನಾಮಿನಿಗಳ ಸಂಖ್ಯೆಯನ್ನು ಒಂದರಿಂದ ನಾಲ್ಕಕ್ಕೆ ಏರಿಸಲು ಪ್ರಸ್ತಾಪಿಸಲಾಗಿದ್ದು, ಒಂದೇ ಬಾರಿ ನಾಲ್ಕು ನಾಮಿನಿಗಳನ್ನು ಒದಗಿಸಬಹುದು.
ಈ ಕ್ರಮವು ಠೇವಣಿದಾರರಿಗೆ ಮತ್ತು ಅವರ ಕಾನೂನು ಉತ್ತರಾಧಿಕಾರಿಗಳಿಗೆ ಹೆಚ್ಚಿನ ನಮ್ಯತೆ ಮತ್ತು ಅನುಕೂಲವನ್ನು ನೀಡುವ ಗುರಿ ಹೊಂದಿದೆ. ವಿಶೇಷವಾಗಿ ಠೇವಣಿಗಳು, ಸುರಕ್ಷತಾ ಲಾಕರ್ಗಳಿಗೆ ಸಂಬಂಧಿಸಿದಂತೆ ಹೆಚ್ಚು ಸಹಾಯಕವಾಗಲಿದೆ. ಮೊದಲ ನಾಮಿನಿ ಹಣವನ್ನು ಕ್ಲೈಮ್ ಮಾಡಲು ಲಭ್ಯವಿಲ್ಲದಿದ್ದರೆ, ಎರಡನೇ ನಾಮಿನಿಯನ್ನು ಕರೆಯಲಾಗುವುದು, ನಂತರ ಮೂರನೆಯವರು ಇತ್ಯಾದಿ. ಪ್ರಸ್ತುತ ಒಂದು ಬ್ಯಾಂಕ್ ಖಾತೆಗೆ ಒಬ್ಬರು ನಾಮಿನಿಯನ್ನಷ್ಟೇ ಹೆಸರಿಸಲು ಅವಕಾಶ ಇದೆ. ಈ ತಿದ್ದುಪಡಿಯಿಂದ ನಿಮ್ಮ ಬ್ಯಾಂಕ್ ಖಾತೆಗೆ ನೀವು ನಾಲ್ವರು ವಾರಸುದಾರರನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.