ಹೊಸ ವರ್ಷದ ದಿನ ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ ಗೆ ಬಂಪರ್ ಆದಾಯ ಸಿಕ್ಕಿದೆ. ಸಂಭ್ರಮಾಚರಣೆಯಲ್ಲಿ ಬಂದಿದ್ದ ಜನಸಾಗರ ಬಿಎಂಟಿಸಿ ಖಜಾನೆಯನ್ನ ತುಂಬಿಸಿದೆ. ಹೊಸ ವರ್ಷದ ಹಿನ್ನೆಲೆ ಒಂದೇ ದಿನದಲ್ಲಿ ಬಿಎಂಟಿಸಿಗೆ ಕೋಟಿ ಕೋಟಿ ಆದಾಯ ಹರಿದು ಬಂದಿದೆ.
ಹೊಸ ವರ್ಷಾಚರಣೆ ನಿಮಿತ್ತ ಡಿ.31ರಂದು ಮಧ್ಯರಾತ್ರಿ 2 ಗಂಟೆಯವರೆಗೆ ಬಿಎಂಟಿಸಿ ಬಸ್ ಸಂಚಾರ ಮಾಡಿದ್ದವು. ಬಿಎಂಟಿಸಿಯಿಂದ ನಗರದ ವಿವಿಧ ಭಾಗಗಳಿಗೆ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿತ್ತು. ಮಂಗಳವಾರ ಒಂದೇ ದಿನ 35 ಲಕ್ಷ ಪ್ರಯಾಣಿಕರು ಪ್ರಯಾಣ ಮಾಡಿದ್ದರು. ಈ ಹಿನ್ನೆಲೆ ಬಿಎಂಟಿಸಿಗೆ 5 ಕೋಟಿ ಹಣ ಕಲೆಕ್ಷನ್ ಆಗಿದೆ. ಒಟ್ಟು 35,70,842 ಪ್ರಯಾಣಿಕರು ಬಸ್ಸಿನಲ್ಲಿ ಪ್ರಯಾಣ ಮಾಡಿದ್ದರು. ಇದರಿಂದ ಬಿಎಂಟಿಸಿಗೆ ಒಟ್ಟು 5.48 ಕೋಟಿ ರೂ. ಸಂಗ್ರಹ ಆಗಿದೆ.
ನಮ್ಮ ಮೆಟ್ರೋ ಕೂಡ ಇಂದು ಆದಾಯ ಹೆಚ್ಚಿಸಿಕೊಂಡಿದೆ. BMRCL 2025ರ ಹೊಸ ವರ್ಷದ ಹಿಂದಿನ ದಿನದಂದು ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ ಮೆಟ್ರೋ ರೈಲು ಸೇವೆಗಳನ್ನು ವಿಸ್ತರಣೆ ಮಾಡಿತ್ತು. ಕೊನೆಯ ರೈಲು ಜನವರಿ 1, 2025 ರಂದು ಮುಂಜಾನೆ 02:00 ಗಂಟೆಗೆ ಎಲ್ಲಾ ಟರ್ಮಿನಲ್ ನಿಲ್ದಾಣಗಳಿಂದ, ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣ ನಿಂದ ಕೊನೆಯ ರೈಲು ಎಲ್ಲಾ ನಾಲ್ಕು ದಿಕ್ಕುಗಳಿಗೆ ಮುಂಜಾನೆ 2:40 ಗಂಟೆಗೆ ಹೊರಡುತ್ತದೆ ಎಂದು ಮೊದಲೇ ತಿಳಿಸಿತ್ತು.
ಎಂ.ಜಿ ರಸ್ತೆಯಲ್ಲಿ ಜನಸಂದಣಿ ಹಿನ್ನೆಲೆ ಡಿಸೆಂಬರ್ 31, 2024 ರಂದು ರಾತ್ರಿ 11:00 ಗಂಟೆಯಿಂದ ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣದ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಬಂದ್ ಮಾಡಲಾಗಿತ್ತು. ಪ್ರಯಾಣಿಕರ ಬಳಕೆಗಾಗಿ ಹತ್ತಿರದ ನಿಲ್ದಾಣಗಳಾದ ಟ್ರಿನಿಟಿ ಮತ್ತು ಕಬ್ಬನ್ ಪಾರ್ಕ್ನಲ್ಲಿ ರೈಲುಗಳನ್ನ ಸ್ಥಗಿತಗೊಳಿಸಲಾಗಿತ್ತು.
ಟ್ರಿನಿಟಿ ಮತ್ತು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳಿಂದ ಯಾವುದೇ ನಿಲ್ದಾಣಕ್ಕೆ ರಾತ್ರಿ 11:00 ಗಂಟೆಯ ನಂತರ ಪ್ರಯಾಣಿಸುವ ಪ್ರಯಾಣಿಕರು 50 ಬೆಲೆಯ ರಿಟರ್ನ್ ಜರ್ನಿ ಪೇಪರ್ ಟಿಕೆಟ್ ಅನ್ನು ನೀಡಲಾಗಿತ್ತು. ಈ ಕಾಗದದ ಟಿಕೆಟ್ ಅನ್ನು ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ 31ನೇ ಡಿಸೆಂಬರ್ 2024ರ ಬೆಳಗ್ಗೆ 8:00 ರಿಂದ ಮುಂಗಡವಾಗಿ ಖರೀದಿಸಬಹುದಾಗಿತ್ತು. ಸಾಮಾನ್ಯ QR ಕೋಡ್ ಟಿಕೆಟ್ಗಳು ಮತ್ತು ಕಾರ್ಡ್ಗಳು ಈ ನಿಲ್ದಾಣಗಳಿಂದ ಪ್ರಯಾಣಿಸಲು ಮಾನ್ಯತೆ ನೀಡಿತ್ತು ಬಿಎಂಆರ್ಸಿಎಲ್.