ಹೊಸ ವರ್ಷಾಚರಣೆಗೂ ನಂದಿಬೆಟ್ಟಕ್ಕೂ ಅವಿನಾಭಾವ ಸಂಬಂಧ.. ಪ್ರಕೃತಿಯ ಮಡಿಲಲ್ಲಿ ಕುಡಿದು ಕುಣಿದು ಕುಪ್ಪಳಿಸಿ ಹೊಸ ವರ್ಷ 2025ನ್ನು ಸ್ವಾಗತಿಸೋಣ ಎಂದು ಕೆಲ ಚಾರಣಿಗರು ಅಂದುಕೊಂಡಿದ್ರೆ.. ಈಗಲೇ ನಿಮ್ಮ ಪ್ಲ್ಯಾನ್ ಚೇಂಜ್ ಮಾಡಿ, ಯಾಕಂದ್ರೆ ನಂದಿ ಬೆಟ್ಟದಲ್ಲಿ ಹೊಸ ವರ್ಷಾಚರಣೆಗೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಸಂಪೂರ್ಣ ನಿಷೇಧ ಏರಿಬಿಟ್ಟಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟ ಅಂದ್ರೆ ತಂಪಾದ ಹವಾಮಾನ, ತುಂತುರು ಮಳೆ, ಗಿಡ, ಮರ, ಬಳ್ಳಿಗಳ ಸೊಬಗು, ನಕ್ಕು ನಲಿಯುವ ತರಹೆವಾರು ಹೂಗಳ ವಯ್ಯಾರ. ಮಿಗಿಲಾಗಿ ಸಮುದ್ರಮಟ್ಟದಿಂದ 1,478 ಮೀಟರ್ ಎತ್ತರದಲ್ಲಿ ನಿಂತು ಸೂರ್ಯೋದಯ ಹಾಗೂ ಸೂರ್ಯಾಸ್ತದ ವಿಹಂಗಮ ನೋಟ ನೋಡುವುದಕ್ಕೆ ರೋಮಾಂಚನ. ಇನ್ನೂ ನಂದಿಗಿರಿಧಾಮದಲ್ಲಿ ಕಾಣಸಿಗುವ ಬೆಳ್ಳಿ ಮೋಡ, ಇಬ್ಬನಿ, ಎತ್ತ ನೋಡಿದರೂ ಮುತ್ತಿಕ್ಕುವ ಮಂಜು, ಇಂಥ ಪ್ರಕೃತಿ ಸೊಬಗಿನಲ್ಲಿ ಕುಳಿತು ಹೊಸ ವರ್ಷ 2025ನ್ನು ವೆಲ್ಕಮ್ ಮಾಡೋಣ ಅಂತ ಕೆಲವರು ಅಂದುಕೊಂಡಿರುತ್ತೀರಿ. ಆದ್ರೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಪಾರ್ಟಿ ಪ್ರಿಯರ ಕನಸಿಗೆ ಬ್ರೇಕ್ ಹಾಕಿದೆ. ಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ ನಿರ್ಬಂಧ ವಿಧಿಸಿದೆ.
ಈ ವರ್ಷದ ಕೊನೆ ದಿನ ಡಿಸೆಂಬರ್ 31ರ ಸಂಜೆ 6 ಗಂಟೆಯಿಂದ 2025 ಜನವರಿ 1 ರಂದು ಬೆಳಿಗ್ಗೆ 6 ಗಂಟೆವರೆಗೂ ಸಾರ್ವಜನಿಕ ಪ್ರವೇಶ ನಿರ್ಬಂಧಿಸಿದ್ದು, ಜೊತೆಗೆ ಅತಿಥಿ ಗೃಹಗಳಿಗೆ ಪ್ರವೇಶವನ್ನೂ ಮುಚ್ಚಿದ್ದಾರೆ. ಒಟ್ಟಾರೆ ಹೊಸ ವರ್ಷ ಆಚರಣೆಗೆ ಬೆಂಗಳೂರಿನ ಪಬ್ ರೆಸಾರ್ಟ್ಗಳ ಬದಲು ಪ್ರಕೃತಿಯ ಮಡಿಲಲ್ಲಿ ಹೊಸ ವರ್ಷಾಚರಣೆಯ ಕನಸ್ಸು ಕಂಡಿದ್ದ ಯುವ ಸಮುದಾಯಕ್ಕೆ ಬೇಸರದ ವಿಚಾರ ಇದಾಗಿದೆ.