ಹೊಸವರ್ಷ ಬಂತೆಂದರೆ ಸಾಕು ಎಲ್ಲೆಲ್ಲಿಯೋ ಸಂಭ್ರಮ ಸಡಗರ. ಅದರಲ್ಲೂ ಸಿಲಿಕಾನ್ ಸಿಟಿಯ ಮಂದಿ ಪಾರ್ಟಿ, ಡ್ಯಾನ್ಸ್ ಹಾಗೂ ಎಣ್ಣೆಯ ಮತ್ತಿನಲ್ಲಿ ತೇಲಾಡುತ್ತಾ ಹೊಸ ವರ್ಷದ ಹೊಸ ದಿನವನ್ನ ವೆಲ್ಕಮ್ ಮಾಡುತ್ತಾರೆ. ಬೆಂಗಳೂರಿನ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ ರಸ್ತೆಗಳು ಹೊಸ ವರ್ಷದ ದಿನ ಜಗಮಗ ಎಂದು ಗಮಗಮಿಸುತ್ತಿರುತ್ತವೆ. ಇಂತಹ ಜನದಟ್ಟಣೆ ಸೇರುವ ಜಾಗದಲ್ಲಿ ಪೊಲೀಸರು ಸರ್ಪಗಾವಲು ಇರುತ್ತದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಿದ್ದರೂ ಸಹ ಕುಡಿದ ಮತ್ತಿನಲ್ಲಿ ಒಂದು ಅಹಿತಕರ ಘಟನೆ ನಡೆದಿದೆ.
ಸಿಲಿಕಾನ್ ಸಿಟಿಯಲ್ಲಿ ಹೊಸ ವರ್ಷಾಚರಣೆಯಲ್ಲಿ ಭದ್ರತೆಯ ಮೊದಲ ಆದ್ಯತೆಯೇ ಹೆಣ್ಣು ಮಕ್ಕಳು, ಕುಡಿದ ಅಮಲಿನಲ್ಲಿ ಯಾರು ಹೆಣ್ಣು ಮಕ್ಕಳ ಜೊತೆ ಅನುಚಿತವಾಗಿ ವರ್ತನೆ ಮಾಡದಂತೆ ಪೊಲೀಸರು ಬಿಗಿ ಬಂದೋಬಸ್ತ್ ಜೊತೆಗೆ ಹಲವಾರು ಸಿಸಿಟಿವಿ, ಕ್ಯಾಮೆರಾ ಡ್ರೋನ್ ಕ್ಯಾಮೆರಾ ಇಷ್ಟೆಲ್ಲಾ ಅಳವಡಿಸಿದರೂ ಸಹ ಹೊಸ ವರ್ಷಾಚರಣೆಗೆ ಅಂತ ಬಂದಿದ್ದ ವ್ಯಕ್ತಿ ಎಂಜಿ ರಸ್ತೆಯಲ್ಲಿ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಇದನ್ನು ಕಂಡ ಪೊಲೀಸರು ದುರುಳನಿಗೆ ಖಾಕಿ ಲಾಠಿ ರುಚಿ ತೋರಿಸಿದ್ದಾರೆ.
ಎಂಜಿ ರಸ್ತೆಯಲ್ಲಿ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದು ಕಂಡ ಪೊಲೀಸರು ಆತನನ್ನು ವಿಚಾರಸಿದ್ದಾರೆ. ಈ ವೇಳೆ ಪೊಲೀಸರೊಂದಿಗೆ ವಾಗ್ವಾದ ನಡೆಸಿದ ವ್ಯಕ್ತಿಗೆ ಲಾಠಿ ಏಟು ಕೊಟ್ಟಿದ್ದಾರೆ. ಲಾಠಿ ಏಟಿನ ಜೊತೆಗೆ ಸುತ್ತಮುತ್ತಲಿದ್ದ ಜನರು ಕೂಡ ನಂದೊಂದು ಇರಲಿ ಅಂತ ದರ್ಮದೇಟು ಕೊಟ್ಟಿದ್ದಾರೆ. ಆಮೇಲೆ ಪೊಲೀಸರು ಆರೋಪಿಯನ್ನು ಅಶೋಕನಗರ ಠಾಣೆಗೆ ಕರೆದೊಯ್ದಿದ್ದಾರೆ.
ಹೊಸ ವರ್ಷಾಚರಣೆಗೆ ಎಲ್ಲರೂ ಸೇರಿರುತ್ತಾರೆ. ಅಲ್ಲಿ ಅನುಚಿತ ವರ್ತನೆ ಮಾಡುವುದು, ಹೆಣ್ಣು ಮಕ್ಕಳ ಮೇಲೆ ತಮ್ಮ ಕೆಟ್ಟ ಬುದ್ದಿಯನ್ನ ತೋರಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಸ್ಥಳಿಯರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಇಂತಹ ದುರುಳನಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಅಲ್ಲಿನ ಹಲವಾರು ಮಂದಿ ಆಗ್ರಹಿಸಿದ್ದಾರೆ. ಕುಡಿದು ಅನುಚಿತ ವರ್ತನೆ ತೋರುವುದರ ಜೊತೆಗೆ ಅದನ್ನ ಪ್ರಶ್ನೆ ಮಾಡಿದ ಪೊಲೀಸರ ಮೇಲೆಯೇ ದರ್ಪ ತೋರಿರುವುದು ಕಂಡು ಬಂದಿದೆ. ಹೀಗಾಗಿ ಕುಡುಕನಿಗೆ ಪೊಲೀಸ್ ಲಾಠಿ ರುಚಿ ತೋರಿಸಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಇವನಿಗೆ ತಕ್ಕ ಪಾಠ ಕಲಿಸಿ ಮುಂದೆ ಎಂದೂ ಈ ರೀತಿ ನಡೆದುಕೊಳ್ಳದಂತೆ ಶಿಕ್ಷೆ ವಿಧಿಸಬೇಕು.