ಹೊಸ ವರ್ಷ ಬಂತೆಂದರೆ ಸಾಕು ಸಿಲಿಕಾನ್ ಸಿಟಿಯ ಜನ ಪಾರ್ಟಿಗಳಲ್ಲಿ ಮುಳುಗಿ ಹೋಗುತ್ತಾರೆ. ಬೆಂಗಳೂರಿನ ಬ್ರಿಗೇಡ್ ರೋಡ್, ಎಂಜಿ ರೋಡ್ ಗಳಲ್ಲಿ ಕುಡಿದು ಕುಪ್ಪಳಿಸಿ, ನಶೆಯ ಅಲೆಯಲ್ಲಿ ತೇಲಾಡುತ್ತ ಮೈ ಮರೆಯೋ ಪ್ಲಾನ್ ಇದೆಯಾ.. ಹಾಗಾದ್ರೆ ಇವತ್ತೇ ನಿಮ್ಮ ಪ್ಲಾನ್ ಚೇಂಜ್ ಮಾಡಿಕೊಳ್ಳಿ. ಯಾಕೆಂದರೆ ಈ ಎಲ್ಲಾ ಆಚರಣೆಗೆ ಖಾಕಿ ಬ್ರೇಕ್ ಹಾಕಿದೆ.
ಹೊಸ ವರ್ಷಾಚರಣೆ ದಿನ ಬೆಂಗಳೂರು ನಗರದಲ್ಲಿ ಯಾವುದೇ ರೀತಿಯಾದ ಅಹಿತಕರ ಘಟನೆ ನಡೆಯದಂತೆ ಖಾಕಿ ಕಟ್ಟೆಚ್ಚರ ವಹಿಸೆದೆ. ಮಾದಕ ಜಾಲದ ಮೇಲೂ ಕೂಡ ಕಣ್ಣಿಡಲಾಗಿದೆ. ಈಗಾಗಲೇ ಮೂವರು ವಿದೇಶಿ ಡ್ರಗ್ ಪೆಡ್ಲರ್ ಸೇರಿದಂತೆ 70 ಜನರನ್ನು ಅರೆಸ್ಟ್ ಮಾಡಿದ್ದಾರೆ. ಎರಡೂವರೆ ಕೋಟಿಗೂ ಅಧಿಕ ಮೌಲ್ಯದ ಡ್ರಗ್ಸ್ ಸೇರಿದಂತೆ, ವಿವಿಧ ಮಾದಕ ವಸ್ತುಗಳನ್ನ ಜಪ್ತಿ ಮಾಡಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಇಂದು ತಿಳಿಸಿದ್ದಾರೆ.
ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ದಯಾನಂದ್, ರೆಸ್ಟೋರೆಂಟ್, ಹೋಟೆಲ್ ಮತ್ತು ಪಬ್ಗಳನ್ನು ಹೊಸ ವರ್ಷಾಚರಣೆ ದಿನ ಡಿಸೆಂಬರ್ 31 ರಂದು ರಾತ್ರಿ 1 ಗಂಟೆಯ ಒಳಗಾಗಿ ಬಂದ್ ಮಾಡಬೇಕು. ಯಾವುದೇ ಕಾರಣಕ್ಕೂ ನಿಯಮ ಮೀರಬಾರದು. ಅಂದು, ನಶೆಯಲ್ಲಿ ಮೇಲ್ಸೇತುವೆಗಳ ಮೇಲೆ ರಂಪಾಟ ಮಾಡುವ, ಅಹಿತಕರ ಘಟನೆಗಳು ನಡೆಯುವ ಸಾಧ್ಯತೆ ಇರುತ್ತದೆ. ಹೀಗಾಗಿ, ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ಮೇಲ್ಸೇತುವೆ ಸೇರಿದಂತೆ ನಗರದ ಎಲ್ಲ ಮೇಲ್ಸೇತುವೆಗಳನ್ನು ಬಂದ್ ಮಾಡುತ್ತೇವೆ ಎಂದು ಪೊಲೀಸ್ ಕಮಿಷನರ್ ದಯಾನಂದ್ ಇಂದು ತಿಳಿಸಿದ್ದಾರೆ.
ಬೆಂಗಳೂರು ಹೊರ ವಲಯದಲ್ಲಿ ನಡೆಯುವ ರೇವ್ ಪಾರ್ಟಿ ಸೇರಿದಂತೆ ಎಲ್ಲಾ ಪಾರ್ಟಿಗಳ ಮೇಲೆ ಖಾಕಿ ಕಣ್ಣಿಟ್ಟಿದೆ. ಇನ್ನು, ನಗರದಲ್ಲಿ ಎಂಜಿ ರೋಡ್, ಬ್ರಿಗೆಡ್ ರೋಡ್, ಕೋರಮಂಗಲ, ಇಂದಿರಾನಗರ ಸೇರಿ ಎಲ್ಲಿ ಹೆಚ್ಚು ಜನರು ಸೇರುತ್ತಾರೆ ಅಲ್ಲಿ ಸೇಫ್ಟಿ ಐಲ್ಯಾಂಡ್, ಸಿಸಿ ಟಿ.ವಿ, ಡ್ರೋನ್ ಕ್ಯಾಮೆರಾಗಳನ್ನ ಫಿಕ್ಸ್ ಮಾಡಲಾಗಿದೆ. ಇದರ ಜೊತೆಗೆ ಶ್ವಾನದಳದ ತಪಾಸಣೆ ಮಾಡಲಾಗುತ್ತೆ. ಹೆಚ್ಚಿನ ಲೈಟಿಂಗ್ ವ್ಯವಸ್ಥೆ, ಬ್ಯಾರಿಕೇಡ್ ವ್ಯವಸ್ಥೆ, ಅಗ್ನಿಶಾಮಕ ದಳದ ವಾಹನಗಳು ಇರುತ್ತದೆ ಎಂದು ಮುನ್ನೆಚ್ಚರಿಕೆ ಕ್ರಮಗಳನ್ನ ಪೊಲೀಸ್ ಇಲಾಖೆ ತೆಗೆದುಕೊಂಡಿದೆ ಎಂದು ಪೊಲೀಸ್ ಕಮಿಷನರ್ ದಯಾನಂದ್ ತಿಳಿಸಿದ್ದಾರೆ.
ಬ್ರಿಗೆಡ್, ಎಂಜಿ ರೋಡ್ನಲ್ಲಿ ದ್ವಿಮುಖ ಸಂಚಾರ ಬಂದ್ ಮಾಡಲಾಗಿದೆ. ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶವಿರುತ್ತದೆ. ಡಿಸೆಂಬರ್ 31ರಂದು ರಾತ್ರಿ 11 ಗಂಟೆಯಿಂದ ಎಂಜಿ ರಸ್ತೆ ಮೆಟ್ರೋ ನಿಲ್ದಾಣದ ಪ್ರವೇಶ ದ್ವಾರಗಳನ್ನು ಮುಚ್ಚಲಾಗುತ್ತದೆ. ಹತ್ತಿರದ ಟ್ರಿನಿಟಿ ಮತ್ತು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳಲ್ಲಿ ರೈಲುಗಳು ನಿಲ್ಲುತ್ತವೆ ಎಂದು ಸಂಚಾರ ವ್ಯವಸ್ತೆ ಹೇಗಿರಲಿದೆ ಎಂದು ದಯಾನಂದ್ ತಿಳಿಸಿದ್ದಾರೆ.