ಆನೇಕಲ್ ತಾಲೂಕಿನ ಜಿಗಣಿಯಲ್ಲಿದ್ದ ಶಂಕಿತ ಉಗ್ರನನ್ನು ನಿನ್ನೆ ಅಸ್ಸಾಂನ ಎನ್ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಗಿರೀಶ್ ಬೋರಾ ಅಲಿಯಾಸ್ ಗೌತಮ್ ಬಂಧಿತ ಆರೋಪಿ. ಉಲ್ಫಾ ಸಂಘಟನೆಗೆ ಸೇರಿರುವ ಶಂಕಿತ ಉಗ್ರ ಇವನಾಗಿದ್ದು, ಆಗಸ್ಟ್ನಲ್ಲಿ ಗುವಾಹಟಿಯಲ್ಲಿಯೇ ಐದು IED ಬಾಂಬ್ ಇಟ್ಟು, ಕುಟುಂಬ ಸಮೇತ ಬೆಂಗಳೂರಿಗೆ ಬಂದು ವಾಸವಾಗಿದ್ದ. ಬಳಿಕ ಶಂಕಿತ ಉಗ್ರ ಖಾಸಗಿ ಕಂಪನಿಯಲ್ಲಿ ಗೌತಮ್ ಎನ್ನುವ ಹೆಸರಲ್ಲಿ ಸೆಕ್ಯೂರಿಟಿಯಾಗಿ ಕೆಲಸಕ್ಕೆ ಸೇರಿದ್ದನು.
ಈ ಬಗ್ಗೆ ಪಕ್ಕಾ ಮಾಹಿತಿ ಆಧರಿಸಿದ ಅಸ್ಸಾಂ ಎನ್ಐಎ ಟೀಂ, ಶಂಕಿತ ಉಗ್ರನನ್ನು ಇದೀಗ ಬಂಧಿಸಿದೆ. ಬೆಂಗಳೂರಿನ ಜಿಗಣಿಯಲ್ಲಿ ವಾಸವಿದ್ದ ಈ ಶಂಕಿತ ಉಗ್ರ, ಇಲ್ಲಿಯೂ ಒಂದಷ್ಟು ಪ್ಲ್ಯಾನ್ಗಳನ್ನು ನಡೆಸುತ್ತಿದ್ದ ಅನುಮಾನ ವ್ಯಕ್ತವಾಗಿದೆ. ಸದ್ಯ ಶಂಕಿತನನ್ನ ಬಂಧಿಸಿರೋ ಅಧಿಕಾರಿಗಳು, ಬಂಧಿತನಿಂದ ಮೊಬೈಲ್ ಮತ್ತು ಒಂದಷ್ಟು ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿ, ಇದೀಗ ಆತನನ್ನು ಎನ್ಐಎ ತಂಡ ಅಸ್ಸಾಂಗೆ ಕರೆದೊಯ್ದಿದೆ.
ಕಳೆದ ಆಗಸ್ಟ್.31 ರಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಾಷ್ಟ್ರೀಯ ತನಿಖಾ ದಳ ಅಧಿಕಾರಿಗಳು ಹಿಜ್ಬ್ ಉಲ್ ತಹ್ರೀರ್ ಭಯೋತ್ಪಾದಕ ಸಂಘಟನೆಯ ಅಜೀಜ್ ಅಹ್ಮದ್ ಎಂಬ ಶಂಕಿತ ಉಗ್ರನನ್ನು ಬಂಧಿಸಿದ್ದರು. ಈತ ಶುಕ್ರವಾರ ಬೆಳಗ್ಗೆ ಕೆಂಪೇಗೌಡ ವಿಮಾನ ನಿಲ್ದಾಣದ ಮೂಲಕ ಸೌದಿಯ ಜಿದ್ದಾಗೆ ಪಾರಾರಿಯಾಗುತ್ತಿದ್ದ. ಈ ಕುರಿತು ಖಚಿತ ಮಾಹಿತಿ ಆಧರಿಸಿ ಎನ್ಐಎ ಅಧಿಕಾರಿಗಳು ಶಂಕಿತ ಉಗ್ರ ಅಜೀಜ್ ಅಹ್ಮದ್ನನ್ನು ಬಂಧಿಸಿದ್ದರು. ಇದೀಗ ಮತ್ತೋರ್ವ ಶಂಕಿತ ಉಗ್ರನನ್ನು ಅರೆಸ್ಟ್ ಮಾಡಲಾಗಿದೆ.