ಗ್ಲೋಬಲ್ ನೇವಿಗೇಶನ್ ಸ್ಯಾಟಲೈಟ್ ಸಿಸ್ಟಮ್ (ಜಿಎನ್ಎಸ್ಎಸ್- ಪ್ರಯಾಣಿಸಿದ ದೂರಕ್ಕಷ್ಟೇ ಶುಲ್ಕ ವಿಧಿಸಲು ಅನುವು ಮಾಡುವ ವ್ಯವಸ್ಥೆ) ಅಳವಡಿಸಿಕೊಂಡ ಖಾಸಗಿ ವಾಹನಗಳಿಗೆ, ಹೆದ್ದಾರಿ ಮತ್ತು ಎಕ್ಸ್ಪ್ರೆಸ್ವೇಗಳಲ್ಲಿ 20 ಕಿ.ಮೀ ವರೆಗಿನ ಪ್ರಯಾಣಕ್ಕೆ ಶುಲ್ಕ ವಿಧಿಸದೇ ಇರುವ ಮಹತ್ವದ ನಿರ್ಧಾರವನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿದೆ. ರಾಷ್ಟ್ರೀಯ ಹೆದ್ದಾರಿ ಶುಲ್ಕ ಕಾಯ್ದೆ, 2008ಕ್ಕೆ ತಿದ್ದುಪಡಿ ತರುವ ಮೂಲಕ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಈ ಕುರಿತು ಅಧಿಸೂಚನೆ ಹೊರಡಿಸಿದೆ.
ಹೊಸ ನಿಯಮಗಳ ಅನ್ವಯ, ʻಮೊದಲಿನ 20 ಕಿ.ಮೀ ದೂರ ಪ್ರಯಾಣದವರೆಗೆ ಟೋಲ್ ಅನ್ವಯಿಸದು. 20 ಕಿ.ಮೀ. ದಾಟಿದ ನಂತರ ವಾಹನವು ಪ್ರಯಾಣಿಸಿದ ದೂರಕ್ಕೆ ಮಾತ್ರವೇ ಶುಲ್ಕ ಕಡಿತ ಮಾಡಲಾಗುತ್ತದೆ. 20 ಕಿ.ಮೀ. ಎಂಬುದು 1 ದಿನದ ಕೋಟಾ ಆಗಿದ್ದು, ಪ್ರತಿದಿನ 20 ಕಿ.ಮೀ.ನಷ್ಟು ಉಚಿತವಾಗಿ ಸಂಚರಿಸಬಹುದಾಗಿದೆ. ಜೊತೆಗೆ ಎರಡೂ ದಿಕ್ಕಿನಲ್ಲಿ ಮಾಡುವ ಎರಡೂ ಪ್ರತ್ಯೇಕ ಪ್ರಯಾಣಕ್ಕೂ ಈ ನಿಯಮ ಅನ್ವಯಿಸುತ್ತದೆ.
ಈ ಹಿಂದಿನಂತೆ ಇಡೀ ಟೋಲ್ ವ್ಯಾಪ್ತಿಗೆ ಒಳಪಟ್ಟ ಅಷ್ಟೂ ದೂರಕ್ಕೆ ಶುಲ್ಕ ವಸೂಲಿ ಮಾಡುವುದಿಲ್ಲ’ ಎಂದು ಸರ್ಕಾರ ಮಾಹಿತಿ ನೀಡಿದೆ. ಜಿಎನ್ಎಸ್ಎಸ್ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಈಗಾಗಲೇ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ ಮತ್ತು ಹರ್ಯಾಣದ ಪಾಣಿಪತ್ – ಹಿಸಾರ್ ಮಾರ್ಗಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತಂದಿದೆ.