ಸೈಬರ್ ಅಪರಾಧಿಗಳು ಇತ್ತೀಚೆಗೆ ನೊಯ್ಡಾದ ಸೆಕ್ಟರ್ 62ನಲ್ಲಿರುವ ನೈನಿತಾಲ್ ಬ್ಯಾಂಕ್ ಶಾಖೆಯ ಸರ್ವರ್ ಅನ್ನು ಹ್ಯಾಕ್ ಮಾಡಿ 6.71 ಕೋಟಿ ರೂ. ದೋಚಿದ್ದಾರೆ. ಜೂನ್ 17ರಂದು ಬ್ಯಾಂಕಿನ ಐಟಿ ಮ್ಯಾನೇಜರ್ ಸುಮಿತ್ ಶ್ರೀವಾಸ್ತವ ಅವರು ಬ್ಯಾಂಕಿನ ಬ್ಯಾಲೆನ್ಸ್ ಶೀಟ್ನ ಸಾಮಾನ್ಯ ಪರಿಶೀಲನೆಯ ಸಮಯದಲ್ಲಿ ಈ ಕಳ್ಳತನವನ್ನು ಪತ್ತೆ ಮಾಡಿದ್ದಾರೆ.
ಆರ್ಟಿಜಿಎಸ್ ಖಾತೆಯಲ್ಲಿ 3.60 ಕೋಟಿ ರೂ.ಗಳ ವ್ಯತ್ಯಾಸವನ್ನು ಅವರು ಗಮನಿಸಿದರು. ಇದು ಸೈಬರ್ ಉಲ್ಲಂಘನೆಯ ಸಾಧ್ಯತೆಯನ್ನು ಸೂಚಿಸುತ್ತದೆ. ಈ ಬಗ್ಗೆ ತನಿಖೆಯ ನಂತರ, ಬ್ಯಾಂಕ್ನ ಸರ್ವರ್ ಹ್ಯಾಕ್ ಆಗಿರುವುದು ದೃಢಪಟ್ಟಿದೆ.
ಜೂನ್ 17 ಮತ್ತು ಜೂನ್ 21ರ ನಡುವೆ 84 ವಿವಿಧ ಖಾತೆಗಳಿಗೆ ಬ್ಯಾಂಕ್ನ ಈ ಹಣವನ್ನು ವರ್ಗಾಯಿಸಲಾಗಿದೆ. ಈ ಬಗ್ಗೆ ಶೀಘ್ರವಾಗಿ ಪ್ರತಿಕ್ರಿಯಿಸಿದ ಶ್ರೀವಾಸ್ತವ ಅವರು ಜುಲೈ 10ರಂದು ನೋಯ್ಡಾ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಸೆಕ್ಷನ್ 420 ಅನ್ನು ಉಲ್ಲೇಖಿಸಿ ದೂರು ದಾಖಲಿಸಿದ್ದಾರೆ. ಬ್ಯಾಂಕ್ ಹೆಚ್ಚಿನ ತನಿಖೆಗಾಗಿ CERT-IN ಸಹಾಯವನ್ನು ಕೋರಿದೆ.