ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಆಡೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನರ್ಸ್ ಒಬ್ಬರು ಬಾಲಕನ ಗಾಯಕ್ಕೆ ಸ್ಟಿಚ್ ಹಾಕುವ ಬದಲು ಫೆವಿಕ್ವಿಕ್ ಅಂಟಿಸಿದ್ದಾರೆ . ಈ ಘಟನೆ ಕಳೆದ ಜನವರಿ 14ರಂದು ಸಂಭವಿಸಿದೆ. ಈ ಘಟನೆ ಇತ್ತೀಚೆಗೆ ಬೆಳಕಿಗೆ ಬಂದಿದ್ದು, ಆರೋಗ್ಯ ಸೇವೆಯಲ್ಲಿ ನಿರ್ಲಕ್ಷ್ಯ ಎಂದು ಹೇಳಲಾಗ್ತಿದೆ.
7 ವರ್ಷದ ಗುರುಕಿಶನ್ ಅಣ್ಣಪ್ಪ ಹೊಸಮನಿ ಎಂಬ ಬಾಲಕ ಆಟವಾಡುತ್ತಿದ್ದಾಗ ಕೆನ್ನೆಗೆ ಗಂಭೀರ ಗಾಯವಾಗಿತ್ತು. ಗಾಯದ ಆಳ ಮತ್ತು ರಕ್ತಸ್ರಾವವನ್ನು ಗಮನಿಸಿದ ಕುಟುಂಬದವರು ಅವನನ್ನು ಆಡೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋದರು. ಆದರೆ, ನರ್ಸ್ ಜ್ಯೋತಿ ಎಂಬ ಸಿಬ್ಬಂದಿ ಗಾಯಕ್ಕೆ ಸಾಂಪ್ರದಾಯಿಕ ಹೊಲಿಗೆ ಹಾಕುವ ಬದಲು ಫೆವಿಕ್ವಿಕ್ ಗಮ್ ಬಳಸಿ ಚಿಕಿತ್ಸೆ ನೀಡಿದ್ದಾರೆ.
ಈ ಬಗ್ಗೆ ಪ್ರಶ್ನಿಸಿದಾಗ, “ಸ್ಟಿಚ್ ಹಾಕಿದರೆ ಬಾಲಕನ ಕೆನ್ನೆಗೆ ಕಲೆ ಉಳಿಯುವ ಅಪಾಯ ಇತ್ತು. ಆದ್ದರಿಂದ, ಚರ್ಮದ ಮೇಲ್ಭಾಗದಲ್ಲಿ ಮಾತ್ರ ಫೆವಿಕ್ವಿಕ್ ಹಾಕಿ ತಾತ್ಕಾಲಿಕ ಚಿಕಿತ್ಸೆ ನೀಡಿದೆ” ಎಂದು ನರ್ಸ್ ಜ್ಯೋತಿ ವಿವರಿಸಿದ್ದಾರೆ. ಇದಕ್ಕೆ ಪ್ರತಿಯಾಗಿ, ಕುಟುಂಬದವರು “ನಮ್ಮ ಮಗುವಿಗೆ ಸರಿಯಾದ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ತೋರಲಾಗಿದೆ” ಎಂದು ಆರೋಪಿಸಿದ್ದಾರೆ. ಅಲ್ಲದೆ, ಚಿಕಿತ್ಸಾ ಪ್ರಕ್ರಿಯೆಯ ವಿಡಿಯೋವನ್ನು ಅವರು ರೆಕಾರ್ಡ್ ಮಾಡಿದ್ದು, ಇದನ್ನು ದೂರಿನ ಸಾಕ್ಷ್ಯವಾಗಿ ಸಲ್ಲಿಸಿದ್ದಾರೆ.
ಘಟನೆಯ ವಿವರ ತಿಳಿದ ಜಿಲ್ಲಾ ಆರೋಗ್ಯ ಅಧಿಕಾರಿ (ಡಿ.ಹೆಚ್.ಒ) ಡಾ. ರಾಜೇಶ್ ಸುರಗಿಹಳ್ಳಿ ತನಿಖೆಗೆ ಆದೇಶಿಸಿದ್ದಾರೆ. ಹಾವೇರಿ ತಾಲೂಕಿನ ಗುತ್ತಲ ಆರೋಗ್ಯ ಸಂಸ್ಥೆಗೆ ಈ ಪ್ರಕರಣದ ತನಿಖೆಯನ್ನು ನಿಯೋಜಿಸಲಾಗಿದೆ. ನರ್ಸ್ ಜ್ಯೋತಿಯನ್ನು ಅಮಾನತುಗೊಳಿಸಲು ಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡಲಾಗಿದೆ.
ಬಾಲಕನ ಪೋಷಕರು ಆರೋಗ್ಯ ರಕ್ಷಾ ಸಮಿತಿಗೆ ಫೆವಿಕ್ವಿಕ್ ಬಳಕೆ ಮತ್ತು ಚಿಕಿತ್ಸಾ ನಿರ್ಲಕ್ಷ್ಯದ ಬಗ್ಗೆ ಫಿರ್ಯಾದಿ ದೂರು ಸಲ್ಲಿಸಿದ್ದಾರೆ. “ಮಕ್ಕಳಿಗೆ ಈ ರೀತಿಯ ಅನನುಭವಿ ಚಿಕಿತ್ಸೆ ಸರಿಯಲ್ಲ. ಆರೋಗ್ಯ ಕೇಂದ್ರಗಳಲ್ಲಿ ಸಿಬ್ಬಂದಿಗಳು ಹೆಚ್ಚು ಜವಾಬ್ದಾರಿಯುತವಾಗಿರಬೇಕು” ಎಂದು ಅವರು ಘೋಷಿಸಿದ್ದಾರೆ. ಈ ಪ್ರಕರಣದಲ್ಲಿ ಫೆವಿಕ್ವಿಕ್ ಬಳಕೆ ವೈದ್ಯಕೀಯವಾಗಿ ಸೂಕ್ತವಾಗಿತ್ತೋ ಇಲ್ಲವೋ ಎಂಬುದನ್ನು ತನಿಖೆ ನಿರ್ಧರಿಸಲಿದೆ.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: https://whatsapp.com/channel/0029VafyCqRFnSzHn1JWKi1B
ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ: https://chat.whatsapp.com/HWayJDSBf9aI06q6jplPgc