ದೇಶಾದ್ಯಂತ ಕುತೂಹಲ ಹೆಚ್ಚಿಸಿದ್ದ ಒಡಿಸ್ಸಾದ ಪುರಿ ಜಗನ್ನಾಥ ದೇಗುಲದ ರತ್ನ ಭಂಡಾರವನ್ನು 46 ವರ್ಷಗಳ ಬಳಿಕ ತೆರೆಯಲಾಗಿದೆ. 12ನೇ ಶತಮಾನದ ಪುರಿಯ ಜಗನ್ನಾಥ ದೇವಾಲಯದ ಖಜಾನೆಯಾದ ರತ್ನ ಭಂಡಾರದಲ್ಲಿರುವ ಬೆಲೆಬಾಳುವ ವಸ್ತುಗಳ ದಾಸ್ತಾನು ಮತ್ತು ಅದರ ರಚನೆಯ ದುರಸ್ತಿಗಾಗಿ ತೆರೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಉದ್ದೇಶಕ್ಕಾಗಿ ರಾಜ್ಯ ಸರ್ಕಾರ ರಚಿಸಿದ್ದ ಸಮಿತಿಯ ಸದಸ್ಯರು ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ದೇವಸ್ಥಾನಕ್ಕೆ ಪ್ರವೇಶಿಸಿ, ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ, ಭಂಡಾರವನ್ನು ತೆರೆದಿದ್ದಾರೆ ಎಂದು ವರದಿಯಾಗಿದೆ.
ಇದೇ ವೇಳೆ ಸ್ವಾಮಿ ಜಗನ್ನಾಥ, ಒಡಿಯಾ ಜನರು ಒಡಿಯಾ ಅಸ್ಮಿತೆಯ ಭಾಗವಾಗಿ ಮುಂದುವರಿಯುವ ಪ್ರಯತ್ನ ಮಾಡಲಾಗುತ್ತಿದೆ, ನಿಮ್ಮ ಇಚ್ಛೆಯ ಮೇರೆಗೆ 46 ವರ್ಷಗಳ ನಂತರ ರತ್ನ ಭಂಡಾರವನ್ನು ಮಹತ್ತರ ಉದ್ದೇಶಕ್ಕಾಗಿ ತೆರೆಯಲಾಗಿದೆ” ಎಂದು ಒಡಿಯಾ ಸಿಎಂ ಕಚೇರಿ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದೆ. ಖಜಾನೆ ತೆರೆದಾಗ ಹಾಜರಿದ್ದ 11 ಜನರಲ್ಲಿ ಒರಿಸ್ಸಾದ ಮಾಜಿ ಹೈಕೋರ್ಟ್ ನ್ಯಾಯಾಧೀಶ ಬಿಸ್ವನಾಥ್ ರಾತ್, ಶ್ರೀ ಜಗನ್ನಾಥ ದೇವಸ್ಥಾನದ ಆಡಳಿತ ಮುಖ್ಯ ಆಡಳಿತಾಧಿಕಾರಿ ಅರಬಿಂದ ಪಾಧಿ, ಎಎಸ್ಐ ಸೂಪರಿಂಟೆಂಡೆಂಟ್ ಡಿಬಿ ಗಡನಾಯಕ್ ಮತ್ತು ಪುರಿಯ ಪಟ್ಟದ ರಾಜ ಗಜಪತಿ ಮಹಾರಾಜನ ಪ್ರತಿನಿಧಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.