ಒಡಿಶಾದ ಪುರಾತನ ಜಗನ್ನಾಥ ಮಂದಿರದಲ್ಲಿರುವ ರತ್ನ ಭಂಡಾರದ ಬಾಗಿಲನ್ನು ಬರೋಬ್ಬರಿ 46 ವರ್ಷಗಳ ಬಳಿಕ ತೆರೆಯಲಾಗಿದೆ. ಈ ರತ್ನ ಭಂಡಾರದ ರಹಸ್ಯ ಇಡೀ ದೇಶದ ಕುತೂಹಲ ಕೆರಳಿಸಿದೆ. ಇದರ ಮಧ್ಯೆ ರತ್ನ ಭಂಡಾರದ ಬಾಗಿಲು ತೆರೆದಾಗ ನಡೆದ ಒಂದು ಚಮತ್ಕಾರದ ಘಟನೆ ತೀವ್ರ ಚರ್ಚೆಗೆ ಕಾರಣವಾಗಿದೆ.
ಇಂದು ಮಧ್ಯಾಹ್ನ 1.28ರ ಶುಭಲಗ್ನದಲ್ಲಿ ಪುರಿ ಜಗನ್ನಾಥ ಮಂದಿರದಲ್ಲಿರುವ ರಹಸ್ಯ ಕೊಠಡಿಯ ದ್ವಾರ ತೆರೆಯಲಾಗಿದೆ. ಇದುವರೆಗೂ ದೇವಾಲಯದ 16 ಜನರ ವಿಶೇಷ ತಂಡ ರತ್ನ ಭಂಡಾರ ಕೋಣೆಯನ್ನು ಶೋಧ ನಡೆಸುತ್ತಿದೆ. ರತ್ನ ಭಂಡಾರ ಕೊಠಡಿಯಲ್ಲಿ ಏನಿದೆ ಎಂಬ ಕುತೂಹಲ ಕ್ಷಣ, ಕ್ಷಣಕ್ಕೂ ಹೆಚ್ಚಾಗುತ್ತಿದೆ.
ಇದೇ ವೇಳೆ ರತ್ನ ಭಂಡಾರ ಬಾಗಿಲು ತೆಗೆಯುತ್ತಿದ್ದಂತೆ ದೇವಾಲಯದಲ್ಲಿದ್ದ ಎಸ್ಪಿ ಪಿನಾಕ್ ಮಿರ್ಶಾ ಅವರು ಮೂರ್ಛೆ ಬಿದ್ದಿದ್ದರು. ಮೂರ್ಛೆ ಬೀಳುತ್ತಿದ್ದಂತೆ ಸ್ಥಳದಲ್ಲೇ ಎಸ್ಪಿಗೆ ಚಿಕಿತ್ಸೆ ನೀಡಲಾಗಿತ್ತು. ನಂತರ ಸಿಬ್ಬಂದಿಗಳು ಎಸ್ಪಿಯನ್ನು ಹೊರಗಡೆ ಕರೆತಂದು ಚಿಕಿತ್ಸೆ ನೀಡಲಾಗಿದೆ
ಮೂರ್ಛೆಯಿಂದ ಎಚ್ಚೆತ್ತ ಬಳಿಕ ಪ್ರತಿಕ್ರಿಯೆ ನೀಡಿದ ಎಸ್ಪಿ ಪಿನಾಕ್ ಮಿರ್ಶಾ, ಆ ಸಮಯದಲ್ಲಿ ನನಗೆ ಏನಾಯ್ತೋ ಗೊತ್ತಿಲ್ಲ. ಸದ್ಯ ನಾನು ಆರೋಗ್ಯವಾಗಿದ್ದೇನೆ. ನನಗೆ ಯಾವುದೇ ತೊಂದರೆ ಇಲ್ಲ ಎಂದಿದ್ದಾರೆ.
ಪುರಿ ಜಗನ್ನಾಥ ದೇವಾಲಯದ ರಹಸ್ಯ ಕೋಣೆಯಲ್ಲಿರುವ ರಹಸ್ಯ ಅರಿಯಲು ಭಕ್ತರು ಕುತೂಹಲದಿಂದ ಕಾಯುತ್ತಿದ್ದಾರೆ. ಸದ್ಯ ದೇವಾಲಯದ ಹೊರಗಡೆ ನೂರಾರು ಮಂದಿ ಜಮಾವಣೆಗೊಂಡಿದ್ದಾರೆ. ದೇಗುಲದ ಬಳಿ ಭಕ್ತರ ನಿಯಂತ್ರಿಸಲು ಪೊಲೀಸರ ಹರಸಹಾಸ ಪಡುತ್ತಿದ್ದಾರೆ.