ರಾಜ್ಯದಲ್ಲಿ ಬೆಳ್ಳುಳ್ಳಿ ಬೆಲೆಯು ಗಗನಕ್ಕೇರಿದೆ. ಚಿಲ್ಲರೆ ಮಾರುಕಟ್ಟೆಗಳಲ್ಲಿ ಪ್ರತಿ ಕೆ.ಜಿ ಬೆಳ್ಳುಳ್ಳಿ ಧಾರಣೆಯು ₹400 ದಾಟಿದೆ. ಫೆಬ್ರುವರಿಯಲ್ಲಿ ಬೆಳ್ಳುಳ್ಳಿ ದರವು ₹500 ದಾಟಿತ್ತು. ಪ್ರಸಕ್ತ ವರ್ಷದಲ್ಲಿ ಸತತ ಎರಡನೇ ಸಲ ಜನರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಈಗ ಹಬ್ಬದ ಋತು ಆರಂಭಗೊಂಡಿದೆ. ಮದುವೆ, ಸಭೆ, ಸಮಾರಂಭಗಳು ಹೆಚ್ಚಾಗಿ ನಡೆಯುವ ಕಾರಣ ಬೆಳ್ಳುಳ್ಳಿಗೆ ಬೇಡಿಕೆ ಹೆಚ್ಚಲಿದ್ದು, ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ದೇಶದ ಒಟ್ಟು ಬೆಳ್ಳುಳ್ಳಿ ಉತ್ಪಾದನೆಯ ಪೈಕಿ ಮಧ್ಯಪ್ರದೇಶದ ಪಾಲು ಶೇ 70ರಷ್ಟಿದೆ. ಉಳಿದಂತೆ ರಾಜಸ್ಥಾನ, ಗುಜರಾತ್ ಮತ್ತು ಉತ್ತರ ಪ್ರದೇಶದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ.
ಮಹಾರಾಷ್ಟ್ರ ಹಾಗೂ ಉತ್ತರ ಕರ್ನಾಟಕದ ಕೆಲವೆಡೆ ರೈತರು ಬೆಳ್ಳುಳ್ಳಿ ಬೆಳೆಯುತ್ತಾರೆ. ಮಧ್ಯಪ್ರದೇಶ ಮತ್ತು ರಾಜಸ್ಥಾನದಿಂದ ಅತಿಹೆಚ್ಚು ಪ್ರಮಾಣದಲ್ಲಿ ಕರ್ನಾಟಕಕ್ಕೆ ಬೆಳ್ಳುಳ್ಳಿ ಪೂರೈಕೆಯಾಗುತ್ತದೆ. ಆದರೆ, ಭಾರಿ ಮಳೆಯಿಂದಾಗಿ ಈ ಎರಡೂ ರಾಜ್ಯಗಳಲ್ಲಿ ಉತ್ಪಾದನೆಯು ಕುಸಿತ ಕಂಡಿದೆ. ಹಾಗಾಗಿ, ಮಾರುಕಟ್ಟೆಗೆ ಆವಕ ಕಡಿಮೆಯಾಗಿದ್ದು, ದರ ಹೆಚ್ಚಳವಾಗಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ. ಬೆಂಗಳೂರಿನ ಯಶವಂತಪುರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಈ ಮೊದಲು ಪ್ರತಿದಿನ 5 ಸಾವಿರದಿಂದ 6 ಸಾವಿರ ಚೀಲ ಆವಕವಾಗುತ್ತಿತ್ತು.
ರಾಜ್ಯದಲ್ಲಿ ಭಾರಿ ಮಳೆಯಿಂದಾಗಿ ಮಾರುಕಟ್ಟೆಗೆ ಗುಣಮಟ್ಟದ ಈರುಳ್ಳಿ ಪೂರೈಕೆಯಾಗುತ್ತಿಲ್ಲ. ಈ ನಡುವೆಯೇ ಮಹಾರಾಷ್ಟ್ರದಿಂದ ಆವಕ ಕಡಿಮೆಯಾಗಿದೆ. ಹಾಗಾಗಿ ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ ಈರುಳ್ಳಿ ಧಾರಣೆಯು ₹52 ದಾಟಿದ್ದರೆ ಸೂಪರ್ ಮಾರ್ಕೆಟ್ಗಳಲ್ಲಿ ಕೆ.ಜಿಗೆ ₹80 ಮುಟ್ಟಿದೆ. ‘ಹೊಸದುರ್ಗ ಹಿರಿಯೂರು ಹಗರಿಬೊಮ್ಮನಹಳ್ಳಿ ಕೂಡ್ಲಿಗಿ ಜಗಳೂರು ಹರಪನಹಳ್ಳಿ ಭಾಗದಲ್ಲಿ ಬೆಳೆದಿರುವ ಈರುಳ್ಳಿಯು ಮಳೆಯಿಂದ ಹಾನಿಗೀಡಾಗಿದೆ. ‘ಕರ್ನಾಟಕದಲ್ಲಿ ಮಳೆಯಿಂದ ಈರುಳ್ಳಿ ಬೆಳೆ ನಷ್ಟವಾಗಿರುವ ಬಗ್ಗೆ ಮಹಾರಾಷ್ಟ್ರದ ರೈತರು ಮತ್ತು ವರ್ತಕರಿಗೆ ಅರಿವಿದೆ. ಹಾಗಾಗಿ ರಾಜ್ಯಕ್ಕೆ ಕಳೆದ ಮೂರ್ನಾಲ್ಕು ದಿನಗಳಿಂದ ಪೂರೈಕೆಯನ್ನು ಸ್ಥಗಿತಗೊಳಿಸಿದ್ದಾರೆ. ಮತ್ತಷ್ಟು ಬೆಲೆ ಏರಿಕೆಯಾಗಲಿದೆ ಎಂದು ದಾಸ್ತಾನು ಮಾಡುತ್ತಿದ್ದಾರೆ.