ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಅಜಾತ ಶತ್ರು ಎಸ್.ಎಂ.ಕೃಷ್ಣ ನೆನ್ನೆ ನಿಧನರಾಗಿದ್ದಾರೆ. 92 ವಯಸ್ಸಿಗೆ ತಮ್ಮ ಸುದೀರ್ಘ ಬಾಳಪಯಣವನ್ನ ಅಂತ್ಯಗೊಳಿಸಿದ್ದಾರೆ. ರಾಜ್ಯ ರಾಜಕಾರಣದ ಧೀಮಂತ ನಾಯಕರೆನಿಸಿಕೊಂಡಿದ್ದ ಎಸ್ ಎಂ ಕೃಷ್ಣ ಅವರಿಗೆ ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡುವಂತೆ ವಿಪಕ್ಷ ನಾಯಕ ಆರ್. ಅಶೋಕ್ ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ವಿಪಕ್ಷ ನಾಯಕ ಆರ್. ಅಶೋಕ್, ರಾಷ್ಟ್ರ ಹಾಗೂ ರಾಜ್ಯ ರಾಜಕಾರಣದ ಧೀಮಂತ ನಾಯಕರು, ಮಾಜಿ ಮುಖ್ಯಮಂತ್ರಿ ಶ್ರೀ ಎಸ್.ಎಂ.ಕೃಷ್ಣ ಅವರ ನಿಧನದಿಂದ ಇಡೀ ಕರ್ನಾಟಕ ಶೋಕತಪ್ತವಾಗಿದ್ದು, ನಾಡಿನುದ್ದಕ್ಕೂ ಜನಸಾಮಾನ್ಯರು ಕಂಬನಿ ಮಿಡಿಯುತ್ತಿದ್ದಾರೆ.
ಶಾಸಕ, ಸಚಿವ, ಸ್ಪೀಕರ್, ಉಪಮುಖ್ಯಮಂತ್ರಿ, ಮುಖ್ಯಮಂತ್ರಿ, ಹೀಗೆ ನಾನಾ ಹುದ್ದೆಗಳಲ್ಲಿ ಸೇವೆ ಸಲ್ಲಿಸುವ ಜೊತೆಗೆ, ಜನರ ಬದುಕಿನ ಸುಧಾರಣೆಗಾಗಿ, ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಅವರು ಅಪಾರವಾಗಿ ಶ್ರಮಿಸಿದ್ದರು. ರಾಜಧಾನಿ ಬೆಂಗಳೂರಿಗೆ ಸಿಲಿಕಾನ್ ವ್ಯಾಲಿ ಹಾಗೂ ಐಟಿ ಕೇಂದ್ರದ ಸ್ಥಾನಮಾನ ನೀಡುವಲ್ಲಿ ಅವರ ಪಾತ್ರ ಗಣನೀಯ. ವಿದೇಶಾಂಗ ಸಚಿವರಾಗಿ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಸೇವೆ ಸಲ್ಲಿಸಿ ಕರ್ನಾಟಕದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ.
ಎಸ್.ಎಂ.ಕೃಷ್ಣ ಅವರು ನಾಡಿನ ಪ್ರಗತಿಗೆ ನೀಡಿದ ಕೊಡುಗೆಯನ್ನು ಗುರುತಿಸಿ, ಕರ್ನಾಟಕ ಸರ್ಕಾರದ ವತಿಯಿಂದ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಕರ್ನಾಟಕ ರತ್ನʼ (ಮರಣೋತ್ತರ) ನೀಡುವುದು ಸೂಕ್ತ ಎಂಬುದು ನನ್ನ ಅಭಿಪ್ರಾಯ. ಆದ್ದರಿಂದ ತಾವು ಈ ಸಲಹೆಯನ್ನು ಪರಿಗಣಿಸಿ ಶ್ರೀಯುತರಿಗೆ ‘ಕರ್ನಾಟಕ ರತ್ನʼ ನೀಡಿ ಗೌರವ ಸಲ್ಲಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಮಾಡುತ್ತಿದ್ದೇನೆ ಎಂದಿದ್ದಾರೆ.